ಉಡುಪಿ, ನ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ (ಅನಿತಾ ಮತ್ತು ಗೋಪಾಲ್ ಪುತ್ರ) ಇವನಿಗೆ ಹಿರಿಯಡಕದ ಕೊಂಡಾಡಿಯಲ್ಲಿ, ಅಲೆವೂರಿನ ಎ. ರಘುಪತಿ ಭಟ್ ಇವರು ತಮ್ಮ 84ನೇ ಹುಟ್ಟುಹಬ್ಬದ ಶುಭಾವಸರದಲ್ಲಿ ತಮ್ಮ ತಂದೆ ಅಲೆವೂರು ವಾಸುದೇವ ಭಟ್-ತಾಯಿ ರುಕ್ಮಿಣಿಯಮ್ಮ, ಸಹೋದರಿ ಶಶಿಕಲಾ ತಂತ್ರಿ ಮತ್ತು ಧರ್ಮಪತ್ನಿ ರತ್ನ ಇವರ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ ‘ಶಶಿರತ್ನ’ ನ.7 ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರಘುಪತಿ ಭಟ್ ಅವರು ನನ್ನ ತಂದೆ, ತಾಯಿ, ಪತ್ನಿ ಮತ್ತು ಸಹೋದರಿ ನನ್ನ ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಆಸರೆಯಾಗಿದ್ದಾರೆ. ಅವರೆಲ್ಲರಿಗು ನಾನು ಕೃತಜ್ಞ. ದಾನಗಳಲ್ಲಿ ಆಶ್ರಯದಾನಕ್ಕೆ ವಿಶೇಷ ಮಹತ್ವವಿದೆ. ಆ ಸಂತೋಷ ಇಂದು ಸಿಕ್ಕಿತು. ಯಕ್ಷಗಾನ ಕಲಾರಂಗ ಇದಕ್ಕೆ ಕಾರಣ. ಈ ಸಂಸ್ಥೆ ಸುಮನಸರ ಕೂಟ. ನನಗೆ ಏನೂ ಶ್ರಮವಿಲ್ಲದೆ ಸುಂದರವಾದ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅವರಿಗೂ ನಾನು ಆಭಾರಿಯಾಗಿದ್ದೇನೆ. ಈ ಮನೆಯಲ್ಲಿ ಅಂಕಿತ್ ಮತ್ತು ಅವನ ತಂದೆ ತಾಯಿ ಸುಖವಾಗಿರಲೆಂದು ಹಾರೈಸಿದರು.
ಅಭ್ಯಾಗತರಾದ ಹಿರಿಯಡಕ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರು ಕಲಾರಂಗ ಮಾಡುತ್ತಿರುವ ಮನೆನಿರ್ಮಾಣದ ಈ ಕೆಲಸ ಬ್ರಹ್ಮಕಲಶೋತ್ಸವ ಮಾಡಿಸಿದ ಪುಣ್ಯಕ್ಕೆ ಸಮಾನವಾದುದು. ಈ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ತುಂಬಾ ಮೆಚ್ಚಿಕೊಂಡಿದ್ದೇನೆ ಎಂದರು. ಕೆ. ಪಿ. ಎಸ್. ಹಿರಿಯಡಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ ಅಂಕಿತ್ ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ತನ್ನ ಪ್ರತಿಭೆಯಿಂದ ವಿದ್ಯಾರ್ಥಿಯಾಗಿರುವಾಗಲೇ ತಂದೆ ತಾಯಿಗಳಿಗೆ ಒಳ್ಳೆಯ ಮನೆ ಕಲ್ಪಿಸಿದ್ದಾನೆ. ಕಲಾರಂಗದ ಯಕ್ಷಶಿಕ್ಷಣ ಮಹಾಭಿಯಾನದಲ್ಲಿ ಕಳೆದ ಮೂರು ವರ್ಷಗಳಿಂದ ಅವರೊಂದಿಗೆ ಕಿಂಚಿತ್ ಕೆಲಸ ಮಾಡುವ ಅವಕಾಶ ನನಗೊದಗಿದ ಭಾಗ್ಯ ಎಂದು ಹೇಳಿದರು.
ಕೃಷ್ಣರಾಜ ತಂತ್ರಿಯವರು ಕಲಾರಂಗದ ಈ ಯೋಜನೆ ಸಾಮಾಜಿಕವಾದ ಅವರ ಸ್ಪಂದನೆಗೆ ದ್ಯೋತಕವಾಗಿದೆ ಎಂದರು. ಹೆರ್ಗ ದಿನಕರ ಶೆಟ್ಟಿಯವರು ತಾನೇ ಮನೆ ಭೇಟಿ ಮಾಡಿದ ವಿದ್ಯಾರ್ಥಿಗೆ ಮನೆ ನಿರ್ಮಿಸಿಕೊಟ್ಟದ್ದಕ್ಕೆ ಸಂತೋಷವಾಗಿದೆ. ಯಕ್ಷಗಾನ ಕಲಾರಂಗ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು. ಪ್ರಭಾವತಿ ವಿ. ಶೆಣೈ ಅವರು ಇದು ನಾನು ಭಾಗವಹಿಸುತ್ತಿರುವ ಮನೆ ಹಸ್ತಾಂತರದ ಮೊದಲ ಕಾರ್ಯಕ್ರಮ. ಈ ಹಿಂದಿನ ಇಂತಹ ಕಾರ್ಯಕ್ರಮಕ್ಕೆ ಬಾರದೆ ನನಗೆ ತುಂಬಾ ನಷ್ಟವಾಯಿತು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಯು. ವಿಶ್ವನಾಥ್ ಶೆಣೈ, ರಘುಪತಿ ಭಟ್ಟರ ಭಾವ ಕೃಷ್ಣರಾಜ ತಂತ್ರಿ, ಮಗಳು ಸವಿತಾ, ಸಂಜನಾ, ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಆಗಮಿಸಿ ಶುಭ ಹಾರೈಸಿ ಸಹಭೋಜನದಲ್ಲಿ ಪಾಲ್ಗೊಂಡರು. ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ್ ಉಪಾಧ್ಯ, ಹಿರಿಯಣ್ಣ ಕಿದಿಯೂರು, ಎ. ನಾಗಭೂಷಣ ಭಟ್, ಮರ್ಣೆ ಉಮೇಶ್ ಭಟ್, ಆರ್. ವಸಂತ, ಡಾ. ರಾಘವೇಂದ್ರ ರಾವ್, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಸನಕ ಎಂ. ಕಡೆಕಾರ್, ಪ್ರಸನ್ನ ಹೆಗಡೆ, ಭರತ್ ಶೆಟ್ಟಿ ಭಾಗವಹಿಸಿದ್ದರು.
ಪೂರ್ವಾಹ್ನ ವೇದಮೂರ್ತಿ ಸೀತಾರಾಮ ಭಟ್ಟರಿಂದ ಗಣಹೋಮ ಧಾರ್ಮಿಕ ಕಾರ್ಯಕ್ರಮ ಮಾಡಿಸಿ ಮಧ್ಯಾಹ್ನ ಎಲ್ಲರಿಗೂ ಭೋಜನ ವ್ಯವಸ್ಥೆ ಏರ್ಪಡಿಸಿ ಅತ್ಯಂತ ಪ್ರೀತಿಯಿಂದ ಮನೆ ಹಸ್ತಾಂತರದ ಕಾರ್ಯಕ್ರಮವನ್ನು ಎ. ರಘುಪತಿ ಭಟ್ಟರು ನಡೆಸಿಕೊಟ್ಟರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.




By
ForthFocus™