ಉಡುಪಿ, ಅ.31: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಬ್ರ್ಯಾಂಡ್ ಅಭಿವೃದ್ಧಿ ಲೋಗೋ ವಿನ್ಯಾಸ, ಪ್ಯಾಕೇಜಿಂಗ್ ವಿನ್ಯಾಸಕ್ಕೆ ಆರ್ಥಿಕ ನೆರವು, ಮೌಲ್ಯವರ್ಧನೆ ಸರಪಳಿಯಡಿಯಲ್ಲಿನ ಚಟುವಟಿಕೆಗಳ ಉನ್ನತೀಕರಣ/ಬಲವರ್ಧನೆಗೆ ಆರ್ಥಿಕ ನೆರವು ಪಡೆಯಲು ಘಟಕದಡಿ ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ರೈತ ಗುಂಪುಗಳು ಹಾಗೂ ರೈತ ಸಾವಯವ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ನೋಂದಣಿ, ಉತ್ಪನ್ನದ ಗುಣಮಟ್ಟ ವಿಶ್ಲೇಷಣೆ, ಬ್ರಾö್ಯಂಡ್ ಮತ್ತು ಲೋಗೋ ವಿನ್ಯಾಸ, ಪ್ಯಾಕೇಜಿಂಗ್ ವಿನ್ಯಾಸ/ಅಭಿವೃದ್ಧಿ ಹಾಗೂ ಮಾರುಕಟ್ಟೆ ಕಲ್ಪಿಸುವ ಕಾರ್ಯಕ್ರಮಗಳಾದ ವೆಬ್ಸೈಟ್ ಜಾಹೀರಾತು, ಸಾಮಾಜಿಕ ಜಾಲತಾಣದ ಬಳಕೆ, ಕೃಷಿ ಆಪ್ ಬಳಕೆ, ರಫ್ತಿಗೆ ಸಹಾಯಧನ, ವ್ಯಾಪಾರ ಮಳಿಗೆಗಳಲ್ಲಿ ಬಾಡಿಗೆ ಆಧಾರದಲ್ಲಿ ಶೆಲ್ಫ್ ಪಡೆಯುವುದು ಮತ್ತು ಪ್ಯಾಕೇಜಿಂಗ್ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತರ ಗುಂಪುಗಳು, ಸಹಕಾರಿ ಸಂಘಗಳು, ಒಕ್ಕೂಟಗಳು, ಕೃಷಿ ನವೋದ್ಯಮಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸದರಿ ಘಟಕದಡಿ ಒಟ್ಟು ಅನುಮೋದಿತ ಪ್ರಾಯೋಜನ ವೆಚ್ಚದ ಶೇ. 50 ಅಥವಾ ಗರಿಷ್ಠ ರೂ.5 ಲಕ್ಷದ ವರೆಗೆ ಸಹಾಯಧನ ಪಡೆಯಲು ಅವಕಾಶವಿದೆ.
ಈಗಾಗಲೇ ಸ್ಥಾಪಿಸಿ ಚಾಲನೆಯಲ್ಲಿರುವ ಮೌಲ್ಯವರ್ಧನೆ ಸರಪಳಿಯಲ್ಲಿನ ಚಟುವಟಿಕೆಗಳ ಉನ್ನತೀಕರಣ/ ಬಲವರ್ಧನೆ ಚಟುವಟಿಕೆಗಳಿಗೆ ಯೋಜನಾ ವರದಿಯ ಶೇ. 50 ರ ಸಹಾಯಧನದಲ್ಲಿ ಬ್ಯಾಂಕ್ ಸಾಲದ ಮುಖಾಂತರ ಗರಿಷ್ಠ ರೂ. 10 ಲಕ್ಷ ಮೀರದಂತೆ ಸಹಾಯಧನ ಪಡೆಯಲು ಅವಕಾಶವಿದ್ದು, ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಗುಂಪುಗಳು ಮತ್ತು ರೈತ ಸಾವಯವ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಡಿ ರೈತ ಉತ್ಪಾದಕ ಸಂಸ್ಥೆಯಡಿ ಬರುವ ರೈತರ ಆಸಕ್ತ ಗುಂಪುಗಳ 2 ರಿಂದ 3 ಪ್ರತಿನಿಧಿಗಳಿಗೆ ಉತ್ಪಾದನಾ ಪದ್ಧತಿ ಗ್ರೇಡಿಂಗ್, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ರಫ್ತು ವಿಷಯಗಳ ಕುರಿತು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು ಸಂಸ್ಥೆಗಳ ಆಸಕ್ತ ರೈತ ಪ್ರತಿನಿಧಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮೇಲ್ಕಂಡ ಚಟುವಟಿಕೆಗಳಿಗೆ ಅರ್ಜಿ ಸಲ್ಲಿಸುವ ಸಂಸ್ಥೆಗಳು/ಉದ್ಯಮಿಗಳ ಕಾರ್ಯಚಟುವಟಿಕೆಯನ್ನು ಜಿಲ್ಲಾ ಮಟ್ಟದ ತಂಡವು ಪರಿಶೀಲಿಸಿ ಅಂತಿಮವಾಗಿ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಸಮಿತಿಯ ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಗುವುದು. ಆಸಕ್ತ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ರೈತ ಗುಂಪುಗಳು, ಸಹಕಾರಿ ಸಂಘಗಳು, ಒಕ್ಕೂಟಗಳು, ಕೃಷಿ ನವೋದ್ಯಮಿಗಳು ಮೇಲ್ಕಂಡ ಅರ್ಹ ಚಟುವಟಿಕೆಗಳಿಗೆ ಅರ್ಜಿಯನ್ನು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ನವೆಂಬರ್ 30 ರ ಒಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.




By
ForthFocus™