ಕುಂದಾಪುರ, ಅ. 22: ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ ಪ್ರಯುಕ್ತ ಕಾರಂತರ ಒಡನಾಡಿ ಹಿರಿಯ ಯಕ್ಷಗಾನ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯಿತು.
ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿದರು. ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಕಾರಂತರ ಹುಟ್ಟೂರ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಅತಿಥಿ ನೆಲೆಯ ಮಾತುಗಳನ್ನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ರಮೇಶ ಬೇಲ್ತೂರು ಅವರು ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ತಮ್ಮ ಸುದೀರ್ಘ ಐವತ್ತಾರು ವರ್ಷದ ಯಕ್ಷ ಪಯಣದ ಬಗ್ಗೆ, ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಪಾಲ್ಗೊಂಡ ನೆನಪುಗಳನ್ನು ಹಾಗೂ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಸಂದರ್ಭದಲ್ಲಿ ಸಿಕ್ಕ ಪ್ರೋತ್ಸಾಹದ ಬಗ್ಗೆ ಹೇಳಿದರು. ಇದೇ ಸಂದರ್ಭ ಅವರು ಕಾರಂತರು ಯಕ್ಷಗಾನ ತರಬೇತಿ ನೀಡುವ ಶಿಸ್ತು ಹಾಗೂ ಅವರ ಪ್ರಯೋಗಶೀಲತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಯಕ್ಷಗಾನ ಸಂಘದ ಸಯೋಜಕರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ರವಿನಂದನ್ ಭಟ್ ಸಂವಾದ ನಡೆಸಿಕೊಟ್ಟರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರೇಷ್ಮಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಪ್ರವೀಣಾ ಎಮ್. ಪೂಜಾರಿ ವಂದಿಸಿ, ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ಅಧ್ಯಯನ ಭೇಟಿಯ ಭಾಗವಾಗಿ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡರು.




By
ForthFocus™