Sunday, October 11, 2026
Sunday, October 11, 2026

ಅ.11-21: ವೈಭವದ ಉಚ್ಚಿಲ ದಸರಾ

ಅ.11-21: ವೈಭವದ ಉಚ್ಚಿಲ ದಸರಾ

Date:

ಉಡುಪಿ, ಅ.10: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅಕ್ಟೋಬರ್ 11ರಿಂದ 21ರ ವರೆಗೆ ಉಡುಪಿ ಉಚ್ಚಿಲ ದಸರಾ ಮಹೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರದ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ವೈಭವದಿಂದ ನಡೆಯಲಿದೆ ಎಂದು ದಸರಾ ಮಹೋತ್ಸವ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ತಿಳಿಸಿದರು.

ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ 5ನೇ ವರ್ಷದ ದಸರಾ ಮಹೋತ್ಸವ ಆಚರಿಸಲಾಗುತ್ತಿದ್ದು ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ದುಂದುವೆಚ್ಚಕ್ಕೆ ಅವಕಾಶ ನೀಡದೇ ಸಂಪ್ರದಾಯ ಹಾಗೂ ಸ್ಥಳೀಯ ಸಂಸ್ಕೃತಿ, ಪ್ರತಿಭೆಗಳಿಗೆ ಅವಕಾಶ ನೀಡಿ ಶಿಸ್ತುಬದ್ಧವಾಗಿ ಆಚರಿಸಲಾಗುವುದು.

ಅ.11ರಂದು ಚಾಲನೆ: ಅ.11ರಂದು ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ದತ್ತಿ ಹಾಗೂ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಬಸವಂತಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಆರೋಗ್ಯ ಸಚಿವ ಯು.ಟಿ.ಖಾದರ್, ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಎಂ.ಲಮಾಣಿ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್ ಸುವರ್ಣ ಮೊದಲಾದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸ್.ಪಿ. ಹರಿರಾಮ್ ಶಂಕರ್ ಮೊದಲಾದವರು ಭಾಗವಹಿಸುವರು. ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಶ್ರೀಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು

ಆಕರ್ಷಕ ವಸ್ತು ಪ್ರದರ್ಶನ: ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ವಸ್ತು ಪ್ರದರ್ಶನಗಳ ಉದ್ಘಾಟನೆಯೂ ನಡೆಯಲಿದೆ ಎಂದು ಡಾ.ಜಿ. ಶಂಕರ್ ತಿಳಿಸಿದರು.

12ರಂದು ಮಹಿಳಾ ದಸರಾಕ್ಕೆ ಸಿಎಂ ಚಾಲನೆ: ಅ.12ರಂದು ಅಪರಾಹ್ನ 4 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರಕ್ಕೆ ಆಗಮಿಸಲಿದ್ದು ಮಹಿಳಾ ದಸರಾಕ್ಕೆ ಚಾಲನೆ ನೀಡುವರು. ತುಳುಭಾಷೆಗೆ ದ್ವಿತೀಯ ಆಡಳಿತ ಭಾಷೆಯ ಸ್ಥಾನಮಾನ ನೀಡಿದ್ದಕ್ಕಾಗಿ ಸಮಸ್ತ ತುಳುವರ ಪರವಾಗಿ ಅಭಿನಂದಿಸಲಾಗುವುದು.

ಶರನ್ನವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಚಂಡಿಕಾಹೋಮ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಸಂಜೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಕಲ್ಪೋಕ್ತ ಪೂಜೆ ನಡೆಯಲಿದ್ದು, ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ. ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯ ಸ್ಪರ್ಧೆ, ಮುದ್ದು ಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ಸಣ್ಣ ಮಕ್ಕಳಿಂದ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಪುರುಷರ ಹುಲಿಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. ಜೊತೆಗೆ ಸಾಮೂಹಿಕ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ, ದಸರಾ ಕವಿಗೋಷ್ಟಿ ಇತ್ಯಾದಿ ಉಡುಪಿ ಉಚ್ಚಿಲ ದಸರಾದ ಮೆರುಗು ಹೆಚ್ಚಿಸಲಿವೆ ಎಂದು ಡಾ.ಜಿ.ಶಂಕರ್ ವಿವರಿಸಿದರು.

21ರಂದು ಶೋಭಾಯಾತ್ರೆ: ಉಡುಪಿ ಉಚ್ಚಿಲ ದಸರಾದ ಪ್ರಮುಖ ಆಕರ್ಷಣೆಯಾದ ಭವ್ಯ ಶೋಭಾಯಾತ್ರೆ ಅ.21ರಂದು ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ. ಅಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಸಾಮೂಹಿಕ ಚಂಡಿಕಾ ಯಾಗ, ಮಹಾಅನ್ನಸಂತರ್ಪಣೆ, ಮಹಾಲಕ್ಷ್ಮೀ ಕಲ್ಪೋಕ್ತಪೂಜೆ ನಡೆದು ಅಪರಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. 3ರಿಂದ ಶ್ರೀಕ್ಷೇತ್ರ ಉಚ್ಚಿಲದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳ್, ಉಚ್ಚಿಲ, ಮೂಳೂರು ಮೂಲಕ ಸಾಗಿ ಕಾಪು ಬೀಚ್ (ದೀಪಸ್ತಂಭ) ತಲುಪಲಿದೆ. ಕಾಪು ದೀಪಸ್ತಂಭದ ಸಮೀಪ ಸಮುದ್ರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ನೀಡಲಿದೆ. ಬೋಟುಗಳ ಮೂಲಕ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ, ಡ್ರೋನ್ ಮೂಲಕ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ನಡೆದು ಸಮುದ್ರದಲ್ಲಿ ಮೂರ್ತಿಗಳ ಜಲಸ್ತಂಭನ ನಡೆಯಲಿದೆ.

ಸುದ್ದಿಗೋಷ್ಟಿಯಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲಿಯಾನ್, ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಮೊಗವೀರ ಮಹಾಜನ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಕವಿತಾ ಶರತ್ ಮೊದಲಾದವರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ರಕ್ತದಾನ ಶಿಬಿರ: 100ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ರಕ್ತದಾನ

ಕಟಪಾಡಿ, ಅ. 10: ರಕ್ತದಾನ ಮಹಾದಾನ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ...

ಎನ್‌ಡಿಎ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ

ಉಡುಪಿ, ಅ.10: ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ನೇವಲ್ ಅಕಾಡೆಮಿಗೆ ಸೇರಬಯಸುವವರಿಗೆ...

ಮುಂದಿನ ವರ್ಷದ ಏಪ್ರಿಲ್ ವರೆಗೆ ಜಾಗತಿಕ ಮಾರುಕಟ್ಟೆಗಳಲ್ಲಿ ರಷ್ಯಾದ ಡೀಸೆಲ್ ಮಾರಾಟದ ಮೇಲಿನ ನಿರ್ಬಂಧ ತೆಗೆದು ಹಾಕಿದ ಅಮೆರಿಕ

ಯು.ಬಿ.ಎನ್.ಡಿ., ಅ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ...

ಸಾಹಿತ್ಯ ಕೃತಿಗಳು ಬದುಕನ್ನು ಸೂಕ್ಷ್ಮವಾಗಿ ಅರ್ಥೈಸಲು ಸಹಕಾರಿ: ಡಾ. ರೇಖಾ ವಿ ಬನ್ನಾಡಿ

ಉಡುಪಿ, ಅ.10: ಕರಾವಳಿಯು ಸಮೃದ್ಧ ಸಾಂಸ್ಕೃತಿಕ ಹಾಗೂ ಮೌಖಿಕ ಪರಂಪರೆ ಹೊಂದಿದೆ....
error: Content is protected !!