ಕೋಟ, ಆ.11: ಜೈ ಕುಂದಾಪ್ರ ಸೇವಾ ಟ್ರಸ್ಟ್ ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿ ದೀಪ ಎಂಬ ಧ್ಯೇಯದಿಂದ ಕಳೆದ ಹತ್ತು ವರ್ಷಗಳಿಂದ ೨೦೦ಕ್ಕೂ ಹೆಚ್ಚು ಸೇವಾ ಯೋಜನೆ, ಅನಾರೋಗ್ಯ ಪೀಡಿತರಿಗೆ ಸಹಾಯಧನ, ಲಾಕ್‌ಡೌನ್ ಸಮಯದಲ್ಲಿ ಒಂದು ಹೊತ್ತಿನ ಅನ್ನದಾನ ಸೇವೆ, ಅಂಗನವಾಡಿ, ಶಾಲೆಗಳಿಗೆ ನೆರವು, ದೇವರ ಮಕ್ಕಳ ಆಶ್ರಮಗಳಿಗೆ ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಸಾಮಾಗ್ರಿ ವಿತರಣೆ, ರಕ್ತದಾನ ಶಿಬಿರ ಆಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕೋಟ ಹಾಡಿಕೆರೆ ಶನೀಶ್ವರ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ಹೇಳಿದರು.
ಭಾನುವಾರ ಶಾಂತಮೂರ್ತಿ ಶನೀಶ್ವರ ಸಭಾಭವನದಲ್ಲಿ ಜೈ ಕುಂದಾಪ್ರ ಸಮ್ಮಿಲನ ೨೦೨೬ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿರಂತರವಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಚಲನ ಬ್ರಹ್ಮಾವರ ಇದರ ಅಧ್ಯಕ್ಷ ನಂದಕಿಶೋರ್ ಹಾಗೂ ಜಾತ್ರೆಗಳಲ್ಲಿ ವಿಶೇಷ ವೇಷ ಧರಿಸಿ ದೇಣಿಗೆ ಸಂಗ್ರಹಿಸಿ ಅಶಕ್ತರಿಗೆ ನೆರವಾಗುವ ಬೆಂಕಿಮಣಿ ಸಂತೋಷ್, ಹಲವಾರು ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡಿರುವ ಯಶಸ್ವಿನಿ ಫ್ರೆಂಡ್ಸ್ ಉದ್ಯಾವರ ಸಂಸ್ಥೆಯ ಪ್ರವೀಣ್ ಅಮೀನ್ ಬಳಗದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಇಪ್ಪತ್ತೈದಕ್ಕೂ ಹೆಚ್ಚು ಹೊಸ ಸದಸ್ಯರು ಸೇರ್ಪಡೆಗೊಂಡರು. ಸಂಸ್ಥೆಯ ಮುಖಸ್ಥ ಪುಂಡಲೀಕ ಮೊಗವೀರ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಮಾಜ ಸೇವಕ ಕೆ. ಶ್ರೀಕಾಂತ್ ಶೆಣೈ ಕೋಟ, ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಯುವ ಉದ್ಯಮಿ ಆದಿತ್ಯ ಕೋಟ, ರಕ್ತದಾನಿ, ಸಾಮಾಜ ಸೇವಕ ರವಿಕುಮಾರ್ ಶೆಟ್ಟಿ ನಡೂರು, ನವಮಿ ವೆಲ್ಡಿಂಗ್ ವರ್ಕ್ ಮಾಲಿಕ ಹರೀಶ್ ದೇವಾಡಿಗ ಕೋಟ, ಪತ್ರಕರ್ತರಾದ ರವೀಂದ್ರ ಕೋಟ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯೆ ಯಶಸ್ವಿನಿ ಬೀಜಾಡಿ ನಿರೂಪಿಸಿದರು. ಜೈ ಕುಂದಾಪ್ರ ತಂಡದ ಪ್ರಧಾನ ಕಾರ್ಯದರ್ಶಿ ದಿವ್ಯ ಕುಂದಾಪುರ ಸ್ವಾಗತಿಸಿದರು. ಸಂಸ್ಥೆಯ ನಿರ್ವಾಹಕ ಜಯರಾಜ್ ಸಾಲಿಯಾನ್ ಪಡುಕರೆ ವಂದಿಸಿದರು.




By
ForthFocus™