ಉಡುಪಿ, ಜು.14: ‘ಸರಕಾರದ ಕೆಲಸ ದೇವರ ಕೆಲಸ’ ಎಂಬ ಮಾತಿಗೆ ಕನ್ನಡಿ ಹಿಡಿದಂತೆ ಉಡುಪಿಯಲ್ಲಿ ಸೋಮವಾರ ತಡರಾತ್ರಿ ಒಂದು ಘಟನೆ ನಡೆದಿದೆ. ಜುಲೈ 13 ರ ಮಧ್ಯರಾತ್ರಿ ಸುಮಾರು 11.15 ಕ್ಕೆ ಉಡುಪಿ ಜಿಲ್ಲೆಯ ಮೂಡುತೋನ್ಸೆ ನೇಜಾರಿನ ಸಮಾಜಕಾರ್ಯ ಉಪನ್ಯಾಸಕಿಯೊಬ್ಬರ ಮನೆಯ ಅಂಗಳದಲ್ಲಿ ಅತ್ಯಂತ ವಿಷಕಾರಿಯಾದ ಕೊಳಕ ಮಂಡಲ (ರಸೆಲ್ಸ್ ವೈಪರ್) ಹಾವು ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತ ಉಪನ್ಯಾಸಕಿ ಉರಗ ತಜ್ಞ ಕುಮಟಾದ ಪವನ್ ನಾಯ್ಕ್ ಅವರಿಗೆ ಕರೆ ಮಾಡಿ ಅವರು 112 ಕೆ ಕರೆ ಮಾಡಲು ಸೂಚಿಸಿದಾಗ 112 ಗೆ ಕರೆ ಮಾಡುತ್ತಾರೆ. ಬಳಿಕ 112 ಪ್ರತಿಕ್ರಿಯೆ ನೀಡಿ ಅರಣ್ಯ ಇಲಾಖೆಯ ಆರ್.ಎಫ್.ಓ ವಾರಿಜಾಕ್ಷಿ ಅವರಿಗೆ ಕರೆ ಮಾಡಲು ಸೂಚನೆ ನೀಡುತ್ತಾರೆ. ಅಷ್ಟೊತ್ತಿಗೆ ಗಂಟೆ 12.30 ದಾಟಿದೆ. ಬಳಿಕ ಅರಣ್ಯ ಇಲಾಖೆಯ ವಾರಿಜಾಕ್ಷಿ ಅವರು ಅರಣ್ಯ ಇಲಾಖೆಯ ಉಡುಪಿಯ ಜುನೈದ್ ಗೆ ಕರೆ ಮಾಡಲು ತಿಳಿಸುತ್ತಾರೆ. ಪಕ್ಕದ ಮನೆಯವರು ಹಾವನ್ನು ಗೋಣಿಯೊಳಗೆ ಹಾಕಲು ಪ್ರಯತ್ನ ಮಾಡುತ್ತಾರೆ. ಕರೆ ಮಾಡಿದ ತಕ್ಷಣ ಜುನೈದ್ ಅವರು ಇನ್ನೊಬ್ಬರ ಜತೆಗೆ ಆಗಮಿಸಿ ಹಿಡಿದ ಹಾವು ಕೊಳಕ ಮಂಡಲ ಎಂಬುದನ್ನು ದೃಢಪಡಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿ ತೆರಳುತ್ತಾರೆ. ಇದೆಲ್ಲಾ ಮುಗಿಯುವಾಗ ಗಂಟೆ 1.15 ದಾಟಿದೆ.
ತಡರಾತ್ರಿಯಾದರೂ ಈ ರೀತಿಯಲ್ಲಿ ಸ್ಪಂದನೆ ನೀಡಿದ ಅರಣ್ಯ ಇಲಾಖೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.




By
ForthFocus™