Wednesday, April 22, 2026
Wednesday, April 22, 2026

ಶಂಕರಾಚಾರ್ಯರ ಚಿಂತನೆಗಳು ಮನುಕುಲದ ಒಳಿತಿಗೆ ದಾರಿದೀಪ: ಕೋಟ ಶ್ರೀನಿವಾಸ ಪೂಜಾರಿ

ಶಂಕರಾಚಾರ್ಯರ ಚಿಂತನೆಗಳು ಮನುಕುಲದ ಒಳಿತಿಗೆ ದಾರಿದೀಪ: ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ಏ.21: ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರುಷರೆಂದು ಗುರುತಿಸಲ್ಪಟ್ಟವರಲ್ಲಿ ಶಂಕರಾಚಾರ್ಯರು ಪ್ರಮುಖರಾಗಿದ್ದು, ಸನಾತನ ಧರ್ಮ ನಶಿಸಿ ಹೋಗುತ್ತಿರುವಂತಹ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಅದೈತ ಸಿದ್ಧಾಂತದ ಸಾರವನ್ನು ಜಗತ್ತಿಗೆ ಸಾರಿರುವ ಶಂಕರಾಚಾರ್ಯರ ಆದರ್ಶ, ಚಿಂತನೆ ಹಾಗೂ ವಿವೇಚನೆಗಳು ಮನುಕುಲದ ಒಳಿತಿಗೆ ದಾರಿದೀಪವಾಗಿದೆ ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಕೇರಳದ ಕಾಲಡಿ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿ, ಸನ್ಯಾಸತ್ವವನ್ನು ಸ್ವೀಕರಿಸಿ, ಶಂಕರನೆಂಬ ಬಾಲಕ ಶಂಕರಾಚಾರ್ಯರಾಗಿ ಜಗತ್ಪ್ರಸಿದ್ದರಾಗಿದ್ದಾರೆ ಎಂಬುದನ್ನು ಇತಿಹಾಸ ನಮಗೆ ತಿಳಿಸುತ್ತದೆ. ಹಿಂದೂ ಧರ್ಮದ ಅವನತಿಯ ಕಾಲದಲ್ಲಿ ಸನಾತನ ಧರ್ಮ ಹಾಗೂ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಹಿಂದೂ ಧರ್ಮದ ಆದರ್ಶ, ಆಚಾರ, ವಿಚಾರಗಳನ್ನು ಪಸರಿಸುತ್ತಾ, ಉತ್ತರದ ಬದರಿ, ದಕ್ಷಿಣದ ಶೃಂಗೇರಿ ಶಾರದಾ ಪೀಠ, ಪೂರ್ವದ ಪುರಿ, ಪಶ್ಚಿಮದ ದ್ವಾರಕಾ ಪೀಠ ಈ ನಾಲ್ಕು ಕಡೆ ಶಕ್ತಿಪೀಠಗಳನ್ನು ಸ್ಥಾಪಿಸಿದ್ದಾರೆ ಎಂದ ಅವರು, ಶಂಕರಾಚಾರ್ಯರೆಂಬ ಜ್ಞಾನದ ಗಣಿ ಕೇವಲ 32 ವರ್ಷಗಳ ಕಾಲ ಬದುಕಿದ್ದರೂ ಸಹ, ತಮ್ಮ ಜೀವಿತಾವಧಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ ಎಂದರು. ಶಂಕರಾಚಾರ್ಯರ ಆದರ್ಶಗಳನ್ನು ಪ್ರಸ್ತುತ ಸಮಾಜಕ್ಕೆ ಅರ್ಥೈಸುವ ನಿಟ್ಟಿನಲ್ಲಿ ಸರಕಾರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂಬುದಕ್ಕೆ ಶಂಕರಾಚಾರ್ಯರು ಸೂಕ್ತ ನಿದರ್ಶನ ಎಂದ ಅವರು, ಎಲ್ಲಾ ಜಾತಿ, ಧರ್ಮದವರು ಒಂದಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತೋರಿಸಿಕೊಟ್ಟ ಶಂಕರಾಚಾರ್ಯರ ಆದರ್ಶಗಳನ್ನು ಮುಂದಿನ ಪೀಳಿಗೆಯು ಪಾಲಿಸುವಂತಾಗಬೇಕು ಎಂದರು.

ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದಿಂದ ಜೀವನ ನಡೆಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಹಲವಾರು ಮಹನೀಯರು ಮಾರ್ಗ ತೋರಿದ್ದು, ಅವರುಗಳ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ಇಂತಹ ಆಚರಣೆಗಳು ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ, ವೇದ- ಉಪನಿಷತ್ತುಗಳನ್ನು ಉಳಿಸಲು ಸಹಕಾರಿಯಾಗಲಿವೆ ಎಂದ ಅವರು, ಶಂಕರಾಚಾರ್ಯರ ಅದ್ವೆತ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬರೂ ದ್ವೇಷ, ಅಸೂಯೆಯೆಂಬ ಭಾವನೆಯನ್ನು ಮರೆತು ಸತ್ಯದ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಜಯಶಂಕರ ಕಂಗಣ್ಣಾರು ಉಪನ್ಯಾಸ ನೀಡಿ ಮಾತನಾಡಿ, ಆಧ್ಯಾತ್ಮ ಲೋಕಕ್ಕೆ ಚೈತನ್ಯ ನೀಡಿದ ಆದಿ ಗುರು ಶ್ರೀ ಶಂಕರಾಚಾರ್ಯರು ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದಾರೆ. ಕೇರಳದ ಕಾಲಡಿಯಲ್ಲಿ ಜನಿಸಿದ ಇವರು, ವೇದ, ಉಪನಿಷತ್ತು, ಪುರಾಣ ಅಧ್ಯಯನಗಳನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡಿದ್ದರು. ತಮ್ಮ ಅತ್ಯಲ್ಪ ಜೀವಿತಾವಧಿಯಲ್ಲಿ ಹಲವಾರು ಗ್ರಂಥರಚನೆ ಮಾಡಿ ಸಾಹಿತ್ಯಲೋಕಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅದ್ವೆತ ಮತವನ್ನು ಬೋಧಿüಸುವುದರೊಂದಿಗೆ ಆಗ ಪ್ರಚಲಿತವಿದ್ದ ಎಲ್ಲ ಮತಗಳಿಗೂ ಮಾರ್ಗದರ್ಶಕರಾಗಿದ್ದ ಮಹಾನ್ ತತ್ವಜ್ಞಾನಿಗಳಾಗಿದ್ದರು. ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೂ ಭಾಷ್ಯ ಬರೆದಿದ್ದರು ಎಂದರು.

ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಅಪಾಯ ಬಂದಿದ್ದ ಕಾಲಘಟ್ಟದಲ್ಲಿ ಹಾಗೂ ಅಂತಹ ದುಃಸ್ಥಿತಿಯ ಸಂದರ್ಭದಲ್ಲಿ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ದೇಶದ ಉದ್ದಗಲಕ್ಕೂ ಸಂಚರಿಸಿ, ಅದ್ವೆ್ತ ಸಿದ್ಧಾಂತವನ್ನು ಪಸರಿಸಿದರು ಎಂದ ಅವರು, ರಾಷ್ಟ್ರೀಯ ಭಾವೈಕ್ಯ ಪ್ರತಿಪಾದಿಸಿದ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತವಾದುದು ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಎ.ಎಸ್.ಪಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಬಾಂಧವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಿರೂಪಿಸಿದರು, ಉಡುಪಿ ಶಂಕರಾಚಾರ್ಯ ಸಮಿತಿಯ ಸದಸ್ಯರಾದ ವಿಶ್ವನಾಥ ಶಾನುಭಾಗ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶ: ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ಕಾರ್ಕಳ, ಏ.21: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ...

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ, ಏ.21: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ...

ಫೋರ್ಥ್‌ಫೋಕಸ್‌ಗೆ ವರ್ಡ್‌ಪ್ರೆಸ್.ಕಾಂ ಮತ್ತು ವೂ ಪಾಲುದಾರ ಮಾನ್ಯತೆ

ಉಡುಪಿ, ಏ.21: ಜಾಲತಾಣ ನಿರ್ಮಾಣ, ವರ್ಡ್‌ಪ್ರೆಸ್ ಅಭಿವೃದ್ಧಿ ಮತ್ತು ಆನ್‌ಲೈನ್ ವಾಣಿಜ್ಯ...

ಹೀರೆಬೆಟ್ಟು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭಟ್ರಕೋಡಿ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ

ಹೀರೆಬೆಟ್ಟು, ಏ.21: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭಟ್ರಕೋಡಿ ಹೀರೆಬೆಟ್ಟು ಇದರ ಜೀರ್ಣೋದ್ಧಾರ...
error: Content is protected !!