ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಒದಗಿಸುವ ದೃಷ್ಠಿಯಿಂದ ಈಗಾಗಲೇ ಉಡುಪಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧ ಬದಲಿ ಮಾರ್ಗ ಮತ್ತು ಪಾರ್ಕಿಂಗ್ ನಿಷೇಧ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಕಾರ್ಕಳ-ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವಂತಹ ವಾಹನಗಳಿಗೆ ಈ ಕೆಳಕಂಡ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಪರಿಷ್ಕರಿಸಿ, ಅಧಿಸೂಚನೆ ಹೊರಡಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.
ಕಾರ್ಕಳ- ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವಂತಹ ವಾಹನಗಳು: ಜ.17 ರಂದು ಸಂಜೆ 7 ಗಂಟೆಯ ತನಕ ಕಾರ್ಕಳ, ಮಣಿಪಾಲಕ್ಕೆ ಹೋಗಿ ಬರುವಂತಹ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ, ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬೇಕು. ಉಡುಪಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಎಲ್ಲಾ ವಾಹನಗಳು ಪ್ರವೇಶಿಸುವುದನ್ನು ನಿಷೇಧಿಸಿದೆ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯ ತನಕ ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಲಕ್ಷ್ಮೀಂದ್ರ ನಗರ, ಸಗ್ರಿ ನೊಳೆ ರಸ್ತೆಯಿಂದಾಗಿ ಪೆರಂಪಳ್ಳಿ ಭಾರತೀಯ ಆಹಾರ ನಿಗಮದ ಮುಂಭಾಗದಿಂದ ಅಂಬಾಗಿಲು ಜಂಕ್ಷನ್ ಮುಖೇನಾ ರಾ.ಹೆ 66 ನ್ನು ಸಂಪರ್ಕಿಸಿ, ಅಂಬಾಗಿಲು, ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್ ಆಗಮಿಸಿ, ಕರಾವಳಿ ಜಂಕ್ಷನ್ ಅಂತಿಮ ನಿಲುಗಡೆಯಾಗಿದ್ದು, ಅಲ್ಲಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ವಾಪಾಸು ನಿಟ್ಟೂರು, ಅಂಬಾಗಿಲು, ಪೆರಂಪಳ್ಳಿ ಮಾರ್ಗವಾಗಿ ಪೆರಂಪಳ್ಳಿ ಭಾರತೀಯ ಆಹಾರ ನಿಗಮದ ಮುಂಭಾಗದಿಂದ ಸಗ್ರಿನೊಳೆ, ಲಕ್ಷ್ಮೀಂದ್ರನಗರ, ಸಿಂಡಿಕೇಟ್ ಸರ್ಕಲ್ ಮುಖೇನಾ ಮಣಿಪಾಲ, ಕಾರ್ಕಳ ಕಡೆಗೆ ಹೋಗಬೇಕು. ಸದ್ರಿ ಮಾರ್ಗವನ್ನು ಹೊರತುಪಡಿಸಿ ಉಳಿದ ಮಾರ್ಗಗಳ ವಾಹನ ಸಂಚಾರ ನಿಷೇಧ ಬದಲಿ ಮಾರ್ಗ ಹಾಗೂ ಪಾರ್ಕಿಂಗ್ ನಿಷೇದದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.




By
ForthFocus™