Friday, January 16, 2026
Friday, January 16, 2026

ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಜಗತ್ತಿನೆಲ್ಲೆಡೆ ಇಂದಿಗೂ ಜೀವಂತ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಜಗತ್ತಿನೆಲ್ಲೆಡೆ ಇಂದಿಗೂ ಜೀವಂತ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ಜ.1: ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದ್ದು, ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿರುವುದು ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಅಮರಶಿಲ್ಪಿ ಜಕಣಾಚಾರಿ ಹೊಯ್ಸಳ ಮತ್ತು ಕಲ್ಯಾಣಿ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯಗಳನ್ನು ನಿರ್ಮಿಸಿದ ಪೌರಾಣಿಕ ಶಿಲ್ಪಿ. ಬೇಲೂರು ಮತ್ತು ಹಳೇಬೀಡಿನ ಕೆತ್ತನೆಗಳಿಗೆ ಹೆಸರುವಾಸಿಯಾದ ಇವರು, ಭಾರತೀಯ ಕಲೆಯ ಸುವರ್ಣಯುಗಕ್ಕೆ ಕೊಡುಗೆ ನೀಡಿದ್ದಾರೆ. ಇವರು ನಿರ್ಮಿಸಿದ ದೇವಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ನಾಜೂಕಾದ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ ಎಂದರು. ಇತಿಹಾಸದಲ್ಲಿ ಶತಮಾನದ ಹಿಂದೆ ಕಲಾತ್ಮಕ ದೇವಾಲಯ ನಿರ್ಮಾಣ ಸಾಧ್ಯ ಎಂದು ಹಾಸನ ಬೇಲೂರಿನ ಚೆನ್ನಕೇಶವ ದೇವಸ್ಥಾನ ಕಂಡಾಕ್ಷಣ ತಿಳಿಯುತ್ತದೆ. ಅದರ ಒಂದೊಂದು ಕಲ್ಲುಗಳು ಐತಿಹಾಸಿಕ ದಾಖಲೆಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಕಲಾತ್ಮಕತೆಯ ಮೆರುಗು, ಒಂದೊಂದು ಕಲ್ಲುಗಳ ಮೇಲಿರುವ ಕುಸುರಿ ಕೆಲಸ. ಜಕಣಾಚಾರಿ ಯವರನ್ನು ಸರಿದೂಗಿಸುವಂತಹ ಶಿಲ್ಪಿ ಮತ್ತೊಬ್ಬರಿಲ್ಲ ಎಂಬುದಕ್ಕೆ ಅವರ ಕೆತ್ತನೆಗಳೇ ನಿದರ್ಶನವಾಗಿದೆ ಎಂದರು.

ಜಕಣಾಚಾರಿಯವರ ಶಿಲ್ಪಕಲೆ, ಕರಕುಶಲತೆ ಅವರ ಐತಿಹಾಸಿಕ ವಿಚಾರಗಳು ಸಮಾಜಕ್ಕೆ ಆದರ್ಶವಾಗಿದ್ದು, ಮುಂದಿನ ಜನಾಂಗ ಇದನ್ನೆಲ್ಲ ಅರಿತುಕೊಳ್ಳಬೇಕು. ಜಕಣಾಚಾರಿಯವರ ಆದರ್ಶವನ್ನು ಇಟ್ಟುಕೊಂಡು ವಿಶ್ವಕರ್ಮ ಸಮಾಜ ತನ್ನ ಕುಸುರಿ ಕೆಲಸದ ಮೂಲಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದ ಅವರು, ನಶಿಸಿಹೋಗುತ್ತಿರುವ ಕಲೆಗಳನ್ನು ಪುನರ್ಜೀವನಗೊಳಿಸುವ ನಿಟ್ಟಿನಲ್ಲಿ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರವು ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿ, ಇತ್ತೀಚೆಗೆ 12,000 ಕೋಟಿ ರೂ.ಗಳನ್ನು ಅವರುಗಳ ಭದ್ರತೆಗಾಗಿ ಮೀಸಲಿರಿಸಿದೆ ಎಂದರು. ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಅಮರಶಿಲ್ಪ ಜಕಣಾಚಾರಿ ಅವರು ನಾಡಿನ ಶಿಲ್ಪಕಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ಶಿಲ್ಪಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಅಮರಶಿಲ್ಪಕಾರರು ಮುಂದಿನ ಹಲವು ಶತಮಾನದವರಿಗೂ ಅವಿಸ್ಮರಣೀಯರಾಗಿದ್ದಾರೆ ಎಂದರು. ಹೊಯ್ಸಳರ ಆಡಳಿತದ ಸಂದರ್ಭದಲ್ಲಿ ಮೂಡಿಬಂದ ಶಿಲ್ಪಿ ಜಕಣಾಚಾರಿ ಇವರು ಕೇವಲ ಶಿಲ್ಪಿಯಲ್ಲ, ಬದಲಾಗಿ ಭಾರತೀಯ ವಾಸ್ತುಶಿಲ್ಪದ ಸಂಕೇತವಾಗಿದ್ದಾರೆ ಎಂದ ಅವರು, ಯಾವುದೇ ಸಮುದಾಯದ ಮನೆ ಅಥವಾ ಕಟ್ಟಡಗಳ ನಿರ್ಮಾಣಕ್ಕೆ ವಿಶ್ವಕರ್ಮರ ಅವಶ್ಯಕತೆ ಇದೆ. ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆ ಉಳಿಸಿ ಬೆಳೆಸಿ, ಮುಂದುವರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಉಪನ್ಯಾಸ ನೀಡಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ತನ್ನದೇ ಆದ ವೈಶಿಷ್ಯವಿದೆ. ಶಿಲ್ಪಿಗಳು ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವವರು. ನಾಡಿನ ಪರಂಪರೆ ಹಾಗೂ ಸಂಸ್ಕೃತಿ, ವಿಜೃಂಭಿಸುವ ಗುಡಿ- ಗೋಪುರಗಳನ್ನು ನಿರ್ಮಿಸುವುದರೊಂದಿಗೆ ತಮ್ಮ ದೈವಿಕ ಭಾವದಲ್ಲಿ ತನ್ಮಯರಾಗಿದ್ದಾರೆ. ತಮ್ಮ ಅಂತಃಕರಣಗಳಲ್ಲಿ ರೂಪುಗೊಂಡ ದೇವಾನುದೇವತೆಗಳ ರೂಪಗಳನ್ನು ಯಥಾವತ್ತಾಗಿ ಶಿಲ್ಪ, ಪ್ರತಿಮೆ, ವಿಗ್ರಹ, ಪುತ್ಥಳಿ ಮೂರ್ತಿಗಳನ್ನಾಗಿ ಕೆತ್ತಲ್ಪಟ್ಟಿದ್ದಾರೆ. ವಿಶ್ವಕರ್ಮ ಪರಂಪರೆಯು ಪ್ರತಿಭಾ ಸಂಪನ್ನರ, ಸೃಜನಶೀಲರ, ಕ್ರಿಯಾಶೀಲರ ಹಾಗೂ ಜ್ಞಾನವಿಜ್ಞಾನಿಗಳ ಪರಂಪರೆಯಾಗಿದೆ ಎಂದರು. ಅಮರಶಿಲ್ಪಿ ಎಂದೇ ಖ್ಯಾತಿ ಗಳಿಸಿದ ಜಕಣಾಚಾರಿ ಅವರು, ಅಪರೂಪದ ಶಿಲ್ಪಿಗಳು. ತಮ್ಮ ಕ್ರಿಯಾಶೀಲತೆಯಿಂದ ಲೋಕಮೆಚ್ಚಿದ ಕಲಾತಪಸ್ವಿಯಾಗಿದ್ದಾರೆ. ಹೊಯ್ಸಳ ಸಾಮ್ರಾಜ್ಯದ ವಿಷ್ಣುವರ್ಧನ ಹಾಗೂ ಅವನ ಪಟ್ಟದರಸಿ ನಾಟ್ಯರಾಣಿ ಶಾಂತಲೆಯ ಕಲಾ ಆಸಕ್ತಿಯ ಪ್ರತೀಕವಾಗಿ ಅವರು ನಿರ್ಮಿಸಿದ, ಶಿಲ್ಪಗಳು, ಗುಡಿ-ಗೋಪುರಗಳು, ಶಿಲಾಬಾಲಿಕೆಯರ ಮೂರ್ತಿಗಳು ಶತಮಾನಗಳಿಂದಲೂ ಕಣ್ಮನಸೆಳೆಯುತ್ತಾ ವಿರಾಜಮಾನವಾಗಿದೆ ಎಂದ ಅವರು, ಜಕಣಾಚಾರಿ ಅವರು ಕೆತ್ತಿದ ಬೇಲೂರು, ಹಳೇಬೀಡು, ಸೋಮನಾಥಪುರ, ಪಟ್ಟದಕಲ್ಲು, ಹಂಪಿ, ಕಲಾಸಿರಿಯನ್ನು ವಿದೇಶಿಗರು ನೋಡಿ, ನಿಬ್ಬೆರಗಾಗಿ ಇವು ಮಾನವ ನಿರ್ಮಿತವೋ, ದೈವಸೃಷ್ಠಿಯೋ ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ. ಇದರಿಂದಾಗಿ ಭಾರತೀಯ ಸಂಸ್ಕೃತಿಯ ವೈಭವ ಇಂದಿಗೂ ವಿಶ್ವಮಾನ್ಯವಾಗಿದೆ ಎಂದರು. ಶಿಲ್ಪಿ ಕಾರ್ಕಳದ ಕೆ.ಸತೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ದ.ಕ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ನಾಗರಾಜ್ ಆಚಾರ್ಯ, ವಿಶ್ವಕರ್ಮ ಸಮುದಾಯಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಿಶ್ರಾಂತ ತಹಶೀಲ್ದಾರ್ ಮುರುಳಿಧರ್ ಆಚಾರ್ಯ ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಯಾಯ ಮಹೋತ್ಸವ: ಪರಿಷ್ಕೃತ ಮಾರ್ಗ ಬದಲಾವಣೆ ಅಧಿಸೂಚನೆ

ಉಡುಪಿ, ಜ.16: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆ,...

ಅಂಬಾಗಿಲು: ಪರಶುರಾಮ‌ ದ್ವಾರ ಗುದ್ದಲಿ ಪೂಜೆ

ಉಡುಪಿ, ಜ.16: ಶೀರೂರು ಮಠಾಧೀಶ ಭಾವೀ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ...

ಶೀರೂರು ಪರ್ಯಾಯ ಒಲಿಪೆ‌ ಸಮರ್ಪಣೆ

ಉಡುಪಿ, ಜ.೧೬: ಪ್ರತಿ ಪರ್ಯಾಯ ಸಂದರ್ಭದಲ್ಲಿ ಪರ್ಯಾಯ ಪೀಠವೇರುವ ಮಠದಿಂದ ಇತರ...
error: Content is protected !!