ಕೋಟ, ಡಿ.15: ಸಮುದ್ಯತಾ ಪ್ರಸ್ತುತಿಯಲ್ಲಿ ಡಿಸೆಂಬರ್ ೨೦ರಂದು ಸಂಜೆ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಡಾ.ಸಿ ಅಶ್ವಥ್ ಸ್ವರ ಸಂಯೋಜನೆಯ ಗೀತೆಗಳ ಪ್ರಸ್ತುತಿ `ಕುಂದಾಪುರದಲ್ಲಿ ಸತ್ಯಾವತಾರ’ ಕಾರ್ಯಕ್ರಮದ ಪೋಸ್ಟರ್ ಅನಾವರಣ ಕಾರ್ಯಕ್ರಮ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆಯಿತು. ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ.ಕುಂದರ್, ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಮುದ್ಯತಾ ಸಂಸ್ಥೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುನ್ನುಡಿ ಬರೆಯುವ ಜತೆಗೆ ಜನರಿಗೆ ಹೊಸತನ್ನು ಪರಿಚಯಿಸುವಲ್ಲಿಯೂ ಆಸಕ್ತಿ ವಹಿಸುತ್ತಿದೆ ಎಂದರು.
ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಮಾತನಾಡಿ, ಸಿ.ಅಶ್ವಥ್ ಅವರು ಭಾವಗೀತೆಗಳನ್ನು ಹಾಡಲು ಆರಂಭಿಸಿದ ಬಳಿಕ ಭಾವಗೀತೆಗಳ ಬಗ್ಗೆ ಜನರ ಆಕರ್ಷಣೆ ಜಾಸ್ತಿಯಾಗತೊಡಗಿತು. ಅಶ್ವಥ್ ಅವರ ಸ್ವರದಲ್ಲಿ ಕ್ಲಿಷ್ಟವೆನಿಸುವ ಭಾವಗೀತೆಗಳು ಸುಲಲಿತವಾಗಿ, ಜೀವ ಪಡೆದುಕೊಂಡು ಜನಮನದಲ್ಲಿ ಹಾಸುಹೊಕ್ಕಾಯಿತು. ಅಂಥಹ ಅಪರೂಪದ ಕಾರ್ಯಕ್ರಮ ಈ ಭಾಗದಲ್ಲೂ ಆಯೋಜನೆ ಆಗುತ್ತಿರುವುದು ಶ್ಲಾಘನಾರ್ಹ ಎಂದರು.
ಜನಸೇವಾ ಟ್ರಸ್ಟ್ ಗಿಳಿಯಾರು ಇದರ ಅಧ್ಯಕ್ಷರಾದ ವಸಂತ ಗಿಳಿಯಾರು, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ ಶುಭ ಹಾರೈಸಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಕುಂದರ್, ಸಮುದ್ಯತಾ ಸಂಸ್ಥೆಯ ಯೋಗೇಂದ್ರ ತಿಂಗಳಾಯ, ಸಾಂಸ್ಕೃತಿಕ ಚಿಂತಕ ಉದಯ್ ಶೆಟ್ಟಿ, ಸಮುದ್ಯತಾ ಪಾಲುದಾರ ಹರೀಷ್ ಪೂಜಾರಿ ಉಪಸ್ಥಿತರಿದ್ದರು.




By
ForthFocus™