ಕೋಟ, ಜು.28: ಗಿಡ ನಡುವ ಬಗ್ಗೆ ನಿರ್ಲಕ್ಷ್ಯ ಸಲ್ಲ. ಪ್ರತಿಯೊಬ್ಬರೂ ಪರಿಸರಸ್ನೇಹಿ ವಾತಾವರಣ ನಿರ್ಮಿಸಿ ಎಂದು ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್ ಕರೆ ನೀಡಿದರು. ಭಾನುವಾರ ಕೋಟತಟ್ಟು ಪಡುಕರೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ , ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ, ರೋಟರಿ ಕ್ಲಬ್ ಕೋಟ ಸಿಟಿ ಇವರ ಸಹಭಾಗಿತ್ವದಡಿ 265ನೇ ಭಾನುವಾರದ ಪರಿಸರ ಸ್ನೇಹಿ ಅಭಿಯಾನದ ಪ್ರಯುಕ್ತ ಹಸಿರು ಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಟತಟ್ಟು ಪಡುಕರೆಯ ವಿವಿಧ ಭಾಗಗಳಲ್ಲಿ ೩೫ ಕ್ಕೂ ಅಧಿಕ ಮನೆಗಳಿಗೆ ತೆರಳಿ ಗಿಡಗಳನ್ನು ನೆಡೆಲಾಯಿತು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಪಂಚಾಯತ್ ಸದಸ್ಯೆ ಅಶ್ವಿನಿ ದಿನೇಶ್, ಮಾಜಿ ಸದಸ್ಯೆ ಸುಜಾತ ಉದಯ್, ಉದ್ಯಮಿ ಕೇಶವ ಪುತ್ರನ್, ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ರವೀಂದ್ರನಾಥ ಹಂದೆ, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷೆ ವಿಶ್ವಪ್ರಕಾಶನಿ ಹಂದೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಮಹೇಶ್ ಬೆಳಗಾವಿ ಸ್ವಾಗತಿಸಿದರು. ಅಜಿತ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕೋಟ ಸಂಯೋಜಿಸಿದರು.




By
ForthFocus™