ಕೋಟೇಶ್ವರ, ಮಾ.5: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇಕೋ ಕ್ಲಬ್ ಸಹಯೋಗದೊಂದಿಗೆ ವ್ಯಸನ ಮುಕ್ತ ಸಮಾಜ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಗಾರವನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪೋಲೀಸ್ ಉಪನಿರೀಕ್ಷಕರಾದ ನಂಜಾ ನಾಯಕ್ ಅವರು ಸದೃಢ ಸಮಾಜದ ನಿರ್ಮಾಣದಲ್ಲಿ ಯುವಜನತೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಮಾಜಕ್ಕೆ ತೊಡಕಾಗಿರುವ ಮಾದಕ ದ್ರವ್ಯಗಳ ಸೇವನೆಯಿಂದ ದೂರವಿದ್ದು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ, ಸಾಮಾಜಿಕ ಪಿಡುಗಾದ ಮಾದಕ ದ್ರವ್ಯಗಳ ಸುಳಿಗೆ ಸಿಲುಕದೆ ರಾಷ್ಟ್ರನಿರ್ಮಾಣದಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಹೇಳಿದರು. ಇಕೋ ಕ್ಲಬ್‌ನ ಸಂಚಾಲಕರಾದ ನಾಗರಾಜ ಯು ಕಾರ್ಯಕ್ರಮ ಸಂಘಟಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ನಾಗರಾಜ ವೈದ್ಯ ಎಂ., ವಿದ್ಯಾರ್ಥಿ ಪ್ರತಿನಿಧಿಗಳಾದ ಅಂತಿಮ ಬಿ.ಕಾಂ ಶಶಿಧರ ಮತ್ತು ಸಿಂಚನ ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕರಾದ ರವಿಚಂದ್ರ ಹೆಚ್.ಎಸ್ ನಿರೂಪಿಸಿದರು. ಇಕೋ ಕ್ಲಬ್‌ನ ವಿದ್ಯಾರ್ಥಿ ಪ್ರತಿನಿಧಿ ಶಶಿಧರ ವಂದಿಸಿದರು.




By
ForthFocus™