ಕೊಲ್ಲೂರು, ಮಾ.2: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಸಕಾರಾತ್ಮಕ ಮತ್ತು ಸಮಗ್ರವಾಗಿ ರೂಪುಗೊಳ್ಳುತ್ತದೆ. ಶಿಸ್ತುಬದ್ಧವಾದ ಜೀವನ ಮತ್ತು ಸೇವಾ ಮನೋಭಾವನೆಯು ನಾಯಕತ್ವದ ಗುಣಗಳ ಬೆಳೆವಣಿಗೆಗೆ ಕಾರಣವಾಗುತ್ತದೆ. ಅಂತಹ ವ್ಯಕ್ತಿತ್ವ ವಿಕಸನದ ಹಾದಿಯೇ ರಾಷ್ಟ್ರೀಯ ಸೇವಾ ಯೋಜನೆಯ ಗುರಿ. ಸ್ವಾರ್ಥಗುಣ ತೊಲಗಿಸಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ “ಭಾರತಕ್ಕಾಗಿ ಯುವಕರು-ಡಿಜಿಟಲ್ ಸಾಕ್ಷರತೆಗಾಗಿ ಯುವಕರು” ವಾರ್ಷಿಕ ವಿಶೇಷ ಶಿಬಿರವನ್ನು ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪರಿಸರದಲ್ಲಿ ಉದ್ಘಾಟಿಸಿ ಮಾತನಾಡಿದರು. ತಾವು ವಿದ್ಯಾರ್ಥಿಯಾಗಿ ಎನ್.ಸಿ.ಸಿ ಮತ್ತು ಎನ್ನೆಸ್ಸೆಸ್ ಶಿಬಿರಗಳಲ್ಲಿ ಭಾಗವಹಿಸಿದ ದಿನಗಳನ್ನು ಶಾಸಕರು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ನಿತ್ಯಾನಂದ ಅಡಿಗರು ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕತೆಯ ಸಾತ್ವಿಕ ಗುಣ ಹೊಂದಬೇಕೆಂದು ತಿಳಿಸಿದರು. ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕಿ ಮತ್ತು ಪ್ರಶಸ್ತಿ ವಿಜೇತ ಎನ್ನೆಸ್ಸೆಸ್ ಯೋಜನಾಧಿಕಾರಿ ವೈಶಾಲಿ ದಿಕ್ಸೂಚಿ ಭಾಷಣವನ್ನು ಮಾಡಿದರು. ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಶಿಬಿರಕ್ಕೆ ಶುಭ ಕೋರಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟರಾಮ್ ಭಟ್ ಪ್ರಸ್ತಾವನೆಗೈದು ವಿದ್ಯಾರ್ಥಿಗಳು ಸದಾ ಚಟುವಟಿಕೆಗಳಿಂದ ಕೂಡಿರಬೇಕಾದರೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಎನ್ನೆಸ್ಸೆಸ್ ಘಟಕ 1ರ ಯೋಜನಾಧಿಕಾರಿ ಹಾಗೂ ನಿರ್ವಹಣಾ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಜಿ.ಎಸ್ ವಂದಿಸಿದರು. ಘಟಕ 2ರ ಯೋಜನಾಧಿಕಾರಿ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಪ್ರಜ್ಞಾ, ಸಹ ಯೋಜನಾಧಿಕಾರಿ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಪ್ರವೀಣಾ ಮತ್ತು ಗ್ರಂಥಪಾಲಕಿ ಪೂರ್ಣಿಮ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಸಚಿನ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಶಿಬಿರಾರ್ಥಿಗಳು “ಪ್ಲಾಸ್ಟಿಕ್ ವಿರೋಧಿ ಮತ್ತು ಪರಿಸರ ಜಾಗೃತಿ” ಜಾಥಾ ನಡೆಸಿದರು.




By
ForthFocus™