ಕೋಟ, ಫೆ.18: ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಿಡಿಗೇಡಿಗಳು ಮೂಟೆಗಟ್ಟಲೆ ತ್ಯಾಜ್ಯ ಎಸೆದ ಘಟನೆ ನಡೆದಿದೆ. ಸೋಮವಾರ ರಾತ್ರಿ ಬೆಳಗಾಗುವದರೊಳಗೆ ಒಂದು ತ್ಯಾಜ್ಯದ ಚೀಲ ಕಾಣಿಸಿಕೊಂಡಿತ್ತು. ಮಂಗಳವಾರ ಮುಂಜಾನೆಯ ಒಳಗೆ ಮತ್ತೆ ಮೂರು ಭಾರೀ ಗಾತ್ರದ ತ್ಯಾಜ್ಯದ ಚೀಲ ಅದೇ ಡಿವೈಡರ್ ಮಧ್ಯದಲ್ಲಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೋಟದ ಪಂಚವರ್ಣ ಸಂಘಟನೆ ಅಧ್ಯಕ್ಷ ಮನೋಹರ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಕೆ.ಕೆ ಆರ್ ಕಂಪನಿ ಹಾಗೂ ಕೋಟ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ. ಹೆದ್ದಾರಿಯ ಮಧ್ಯದಲ್ಲಿ ತ್ಯಾಜ್ಯದ ಚೀಲ ಇರಿಸುವ ಕಿಡಿಗೇಡಿಗಳನ್ನು ಕಂಡುಹಿಡಿಯಲು ಸಿಸಿ ಕ್ಯಾಮರ ಅಳವಡಿಸಲು ಸಂಬಂಧಪಟ್ಟ ಸ್ಥಳೀಯಾಡಳಿತ ಅಥವಾ ಕೆ.ಕೆ ಆರ್ ಕಂಪನಿಗೆ ಸ್ಥಳೀಯರು ಮತ್ತು ಸಂಘ ಸಂಸ್ಥೆಗಳು ಆಗ್ರಹಿಸಿದ್ದಾರೆ.