ಕೋಟ, ಫೆ.15: ನಮ್ಮ ಮಕ್ಕಳು ನಮ್ಮ ಸಂಪತ್ತು ಅವರ ಯಶಸ್ಸು ನಮ್ಮೆಲ್ಲರ ಕನಸು, ಹಾಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸಮೀಪಿಸುತ್ತಿದೆ ಪಠ್ಯ ಚಟುವಟಿಕೆಗಳು ಪೂರ್ಣಗೊಂಡಿದೆ. ಇನ್ನೂ ಪರೀಕ್ಷಾ ತಯಾರಿ ಆಗಬೇಕಿದೆ. ಶಾಲೆ ಮತ್ತು ಶಿಕ್ಷಣ ಇಲಾಖೆಯು, ಸಮುದಾಯದ ಸಹಕಾರ ಪಡೆದು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಸಿದ್ಧತೆಗೆ ಪ್ರೇರೇಪಿಸುವ ಕಾರ್ಯ ಎಲ್ಲಡೆ ನಡೆಯುತ್ತಿದೆ. ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಮಣೂರು ಪಡುಕರೆಯಲ್ಲಿ ಪ್ರೇರಣಾ ಕಲಿಯುವ ಮುಗ್ದ ಮನಸ್ಸುಗಳಿಗೆ ಕಲಿಯಲು ಪ್ರೇರಣೆ ನೀಡುವ ಇಂತಹ ಶಿಬಿರ ಶ್ಲಾಘನೀಯ ಎಂದು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ಪ್ರವರ್ತಕ ಆನಂದ ಸಿ ಕುಂದರ್ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಯುವ ಸಂಘಟನೆ ಕೋಟ ಘಟಕ, ಮನಸ್ಮಿತಾ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಸಾರಥ್ಯದಲ್ಲಿ ಎರಡು ದಿನಗಳ ವಿಷಯವಾರು ಶಿಬಿರ ಆಯೋಜನೆಗೊಂಡಿತು. ಮನಸ್ಮಿತಾ ಫೌಂಡೇಶನ್ ಪ್ರವರ್ತಕ ಮನೋಶಾಸ್ತ್ರಜ್ಞ ಡಾ.ಪ್ರಕಾಶ್ ತೋಳಾರ್ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾತನಾಡಿ ಪರೀಕ್ಷೆಗೆ ಓದುವುದು, ನೆನಪಿಟ್ಟುಕೊಳ್ಳುವುದು, ಸಿದ್ಧತೆ ಮಾಡಿಕೊಳ್ಳುವಲ್ಲಿ ನೆನಪಿಟ್ಟುಕೊಳ್ಳುವ ಪ್ರಾಯೋಗಿಕ ಸಿದ್ಧಾಂತದ ಕುರಿತಾಗಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರು. ಶಿಬಿರದ ಆಶಯದ ಕುರಿತಾಗಿ ಪ್ರೌಢಶಾಲಾ ವಿಭಾಗ ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜು ಪಡುಕರೆ ಇದರ ಪ್ರಾಂಶುಪಾಲ ಡೆನ್ನಿಸ್ ಬಾಂಜಿ ಶುಭ ಹಾರೈಸಿದರು.
ಮೊಗವೀರ ಯುವಕ ಮಂಡಲ ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಘವೇಂದ್ರ ಕಾಂಚನ್, ಸಂಪನ್ಮೂಲ ವ್ಯಕ್ತಿಗಳಾದ ಸವಿತಾ ತೋಳಾರ್, ವೈಷ್ಣವಿ ಕುಂದರ್, ಸಹಶಿಕ್ಷಕರಾದ ಅಶ್ವಿನಿ ಬ್ರಹ್ಮಾವರ, ರಾಜೀವ ಪೂಜಾರಿ ತೆಕ್ಕಟ್ಟೆ ಉಪಸಿತರಿದ್ದರು. ಉಡುಪಿ ಜಿಲ್ಲಾಮಟ್ಟದ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಭಾಷಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ರಾಮದಾಸ್ ನಾಯಕ್ ಹಿರಿಯ ಸಹಶಿಕ್ಷಕರು ಸ್ವಾಗತಿಸಿ, ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕ ಮಂಜುನಾಥ ಹೊಳ್ಳ ವಂದಿಸಿದರು. ಸಹಶಿಕ್ಷಕ ಹೆರಿಯ ಮಾಸ್ಟರ್ ನಿರೂಪಿಸಿದರು.