ಕೋಟ, ಫೆ.15: ಇಲ್ಲಿನ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ವಾರ್ಷಿಕ ವರ್ಧಂತಿ ಉತ್ಸವ ಹಾಗೂ ನೂತನ ಸಭಾಭವನದ ಲೋಕಾರ್ಪಣಾ ಕಾರ್ಯಕ್ರಮದ ಅಂಗವಾಗಿ ಬುಧವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚಾಲನೆಗೊಂಡಿದ್ದು ಶುಕ್ರವಾರ ಮುಂಜಾನೆ ಕನ್ನಿಕಾ ದುರ್ಗಾಪರಮೇಶ್ವರಿ ಮಹಾಗಣಪತಿ ಈಶ್ವರ ನಂದಿ ಆಂಜನೇಯ ಕಾಕವಾಹನ ನವಗ್ರಹಗಳಿಗೆ ಕಲಶಾಭಿಷೇಕ ಮಹಾಪೂಜೆ, ಚಂಡಿಕಾ ಹೋಮ, ಮಹಾಮಂಗಳಾರತಿ ಕಾರ್ಯಕ್ರಮಗಳು ವೇ.ಮೂ ಸಾಲಿಗ್ರಾಮ ಜನಾರ್ದನ ಅಡಿಗ ನೇತೃತ್ವದಲ್ಲಿ ಜರಗಿತು. ಧಾರ್ಮಿಕ ವಿಧಿವಿಧಾನಗಳಲ್ಲಿ ದೇಗುಲದ ಧರ್ಮದರ್ಶಿ ಭಾಸ್ಕರ್ ಸ್ವಾಮಿ ದಂಪತಿಗಳು ಭಾಗಿಯಾದರು. ಶ್ರೀ ಶಾಂತಮೂರ್ತಿ ಶ್ರೀ ಶನೀಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತನ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಾದ ರಾಮಾಮೃತ ಭಜನಾ ತಂಡ, ಪಂಚವರ್ಣ ಮಹಿಳಾ ಭಜನಾ ಮಂಡಳಿ,ವಿಠ್ಠೋಭ ಭಜನಾ ಮಂಡಳಿ, ಶ್ರೇಯಾ ಖಾರ್ವಿ ಕುಂಚಗೂಡು ಸೇರಿದಂತೆ ವಿವಿಧ ಗಾಯನ ತಂಡಗಳಿಂದ ಗಾನಸುಧೆ ಜರಗಿದವು.ಸಂಜೆ ಅಂತಾರಾಷ್ಟ್ರೀಯ ಯೋಗಪಟು ಬಾಲನಟಿ ಕಲಾಶ್ರೀ ತನ್ವಿತಾ ವಿ ಇವರಿಂದ ಯೋಗಾಸನ ಭರತನಾಟ್ಯ, ಮನು ಹಂದಾಡಿ ಇವರಿಂದ ನಗೆಹಬ್ಬ, ರಾತ್ರಿ 8 ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಪುಣ್ಯ ಕಥಾನಕ ನೃತ್ಯರೂಪಕ ಬಿಡುವನೇ ಬ್ರಹ್ಮಲಿಂಗ ಕಾರ್ಯಕ್ರಮಗಳು ಜರಗಿದವು. ದೇಗುಲದ ಉತ್ಸವ ಸಮಿತಿ ಪ್ರಮುಖರಾದ ದಿನೇಶ್ ಗಾಣಿಗ ಕೋಟ ಸೇರಿದಂತೆ ಮುಂತಾದವರಿದ್ದರು.