ಉಡುಪಿ, ಏ.19: ಭಾರತ ಚುನಾವಣಾ ಆಯೋಗವು ಮತದಾನ ದಿನದಂದು ಕರ್ತವ್ಯ ನಿರತ ಒಟ್ಟು 16 ಅಗತ್ಯ ಸೇವೆಗಳ ವ್ಯಾಪ್ತಿಗೆ ಒಳಪಡುವ ಗೈರು ಮತದಾರರಿಗೆ (ಎ.ವಿ.ಇ.ಎಸ್) ಮತ್ತು ಚುನಾವಣೆ ಕರ್ತವ್ಯನಿರತ ಮತದಾರರಿಗೆ (ವಿ.ಓ.ಇ.ಡಿ)ಅಂಚೆ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಉಭಯ ವರ್ಗದಲ್ಲಿ ಒಳಪಡುವ ಮತದಾರರಿಗೆ ಅಂಚೆ ಮತದಾನ ಮಾಡಲು ಸೌಲಭ್ಯ ಕೇಂದ್ರಗಳನ್ನು ತರಬೇತಿ ಕೇಂದ್ರಗಳಲ್ಲಿ ಮತ್ತು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಅಂಚೆ ಮತದಾನ ಕೇಂದ್ರಗಳನ್ನು (ಪೋಸ್ಟಲ್ ವೋಟಿಂಗ್ ಸೆಂಟರ್) ಅನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗಿರುತ್ತದೆ. 15-ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎ ಬ್ಲಾಕ್ ನೆಲಮಹಡಿಯ ಕೊಠಡಿ ಸಂಖ್ಯೆ ಎ-102 ನಲ್ಲಿ ಏಪ್ರಿಲ್ 19 ರಿಂದ 21 ರ ವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಅಂಚೆ ಮತದಾನ ಕೇಂದ್ರ (ಪೋಸ್ಟಲ್ ಬ್ಯಾಲೆಟ್ ವೋಟಿಂಗ್ ಸೆಂಟರ್) ಅನ್ನು ಹಾಗೂ ಏಪ್ರಿಲ್ 21 ರಿಂದ 23 ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5.30 ರ ವರೆಗೆ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅರ್ಹ ಚುನಾವಣೆ ನಿರತ ಮತದಾರರು ಕೆಳಗೆ ತಿಳಿಸಲಾದ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬಹುದಾಗಿದೆ.
ವಿಧಾನಸಭಾ ಕ್ಷೇತ್ರವಾರು ಸ್ಥಾಪಿಸಲಾದ ಸೌಲಭ್ಯ ಕೇಂದ್ರಗಳ ವಿವರ: 119-ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ, 121-ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಪು ದಂಡತೀರ್ಥ ಪದವಿಪೂರ್ವ
ಕಾಲೇಜಿನಲ್ಲಿ ಹಾಗೂ 122- ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏಪ್ರಿಲ್ 21 ರಿಂದ 22 ರ ಬೆಳಗ್ಗೆ 10 ರಿಂದ 5.30 ರ ವರೆಗೆ ಮತ ಚಲಾಯಿಸಬಹುದಾಗಿದೆ. 123- ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಪ್ಪದ ನಾಬರ್ಟ್ ಶಾಲೆಯಲ್ಲಿ, 124-ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಡಿಗೆರೆಯ ಡಿ.ಎಸ್.ಬಿ.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, 125-ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಎ.ಐ.ಟಿ ಕಾಲೇಜಿನಲ್ಲಿ ಹಾಗೂ 126- ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತರೀಕೆರೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಏ. 21 ರಿಂದ 23 ರ ಬೆಳಗ್ಗೆ 10 ರಿಂದ 5.30 ರ ವರೆಗೆ ಮತ ಚಲಾಯಿಸಬಹುದಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.