Home ಸುದ್ಧಿಗಳು ಪ್ರಾದೇಶಿಕ ಕೋಟ ಸಾಂಸ್ಕೃತಿಕ ನಗರಿ: ನೀಲಾವರ ಸುರೇಂದ್ರ ಅಡಿಗ

ಕೋಟ ಸಾಂಸ್ಕೃತಿಕ ನಗರಿ: ನೀಲಾವರ ಸುರೇಂದ್ರ ಅಡಿಗ

119
0

ಕೋಟ, ಏ.3: ಸಾಂಸ್ಕೃತಿಕವಾಗಿ ಕರ್ನಾಟಕದಲ್ಲೇ ಛಾಪು ಮೂಡಿಸಿದಂತಹ ಊರು ಕೋಟ. ಹಾಗೆ ಈ ಭಾಗದ ಮಹಿಳೆಯರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಕೋಟದ ರಸರಂಗ ಹಾಗೂ ಯಕ್ಷಮಹಿಳಾ ಬಳಗದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಕೋಟ ವಾಸುದೇವ ಮಂಟಪದಲ್ಲಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಹಾಗೂ ರಸರಂಗದ ಹದಿನೈದನೇ ವರ್ಷದ, ಯಕ್ಷಮಹಿಳಾ ಬಳಗದ ಹತ್ತನೇ ವರ್ಷದ ಸಂಭ್ರಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಿದ್ದರು. ಅತಿಥಿಯಾಗಿ ಭಾಗವಹಿಸಿದ ಕೋಟದ ಸಾಂಸ್ಕೃತಿಕ ಪ್ರತಿನಿಧಿ ಚಂದ್ರಶೇಖರ್ ಆಚಾರ್ ಶುಭ ಹಾರೈಸಿದರು. ಅಭ್ಯಾಗತರಾಗಿಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷರಾದ ಉದ್ಯಮಿ ಆನಂದ್ ಸಿ ಕುಂದರ್, ರಾಜಶೇಖರ ದೇವಸ್ಥಾನದ ಧರ್ಮದರ್ಶಿಗಳಾದ ಪ್ರಭಾಕರ ಅಡಿಗ ಉಪಸ್ಥಿತರಿದ್ದರು.

ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಸಿನೆಮಾ ಹಾಗೂ ಕಿರುತೆರೆಯ ನಟ ರಘು ಪಾಂಡೇಶ್ವರ, ನಾಟ್ಯ ವಿದುಷಿ, ಕಲಾವಿದೆ ಭಾಗೀರತಿ ಎಂ.ರಾವ್, ಕಿರುತೆರೆ ರಂಗಭೂಮಿ ನಟಿ ಪ್ರತಿಮ ನಾಯಕ್, ಯಕ್ಷಗಾನ ಕಲಾವಿದ ರಾಘವೇಂದ್ರ ಗಾಣಿಗ ಇವರಿಗೆ ರಂಗಸಮ್ಮಾನವನ್ನು ನೀಡಿ ಗೌರವಿಸಲಾಯಿತು. ದಿ.ಮಂಜುನಾಥ ಕೋಟ ನೆನಪಿನ ಯುವ ಪುರಸ್ಕಾರವನ್ನು ಕಲಾವಿದ ಪ್ರಸಾದ ಬಿಲ್ಲವ, ದಿ. ಜಯರಾಮ ಆಚಾರ್ ನೆನಪಿನ ಯುವಪುರಸ್ಕಾರವನ್ನು ಕಲಾವಿದ ಶಮಂತ ಗಾಣಿಗರಿಗೆ ನೀಡಿ ಪುರಸ್ಕರಿಸಲಾಯಿತು. ಎರಡೂ ಸಂಸ್ಥೆಯ ಏಳ್ಗೆಯಲ್ಲಿ ಸಹಕರಿಸಿದ ಸಂಘಸಂಸ್ಥೆಗಳು, ಇತರೇ ಸಂಘಟಕರು, ಪೋಷಕರು ಪತ್ರಕರ್ತ ಮಿತ್ರರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಯಕ್ಷಮಹಿಳಾ ಬಳಗದ ಅಧ್ಯಕ್ಷೆ ಸುಶೀಲಾ ಸೋಮಶೇಖರ್ ಉಪಸ್ಥಿತರಿದ್ದರು. ದಿ.ಮಂಜುನಾಥ ಕೋಟ ಹಾಗೂ ದಿ.ಜಯರಾಮ ಆಚಾರ್ಯ ವೇದಿಕೆಯಲ್ಲಿ ಬೆಳಿಗ್ಗೆಯಿಂದ ನಿರಂತರವಾಗಿ ಹೂವಿನಕೋಲು, ನಾಟಕ, ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳು ಸಂಪನ್ನಗೊಂಡವು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಸ್ವಾಗತಿಸಿ, ಕಲಾವಿದೆ ಮಹಾಲಕ್ಷ್ಮಿ ಸೋಮಯಾಜಿ ವಂದಿಸಿದರು. ಯಕ್ಷಮಹಿಳಾ ಬಳಗದ ಸುಪ್ರೀತಾ ಪುರಾಣಿಕ್ ನಿರೂಪಿಸಿದರು. ತದನಂತರ ರಸರಂಗದ ಪುರುಷರ ತಂಡದಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.