ಕಟಪಾಡಿ, ಜ.28: ಪಾಜಕ ಆನಂದತೀರ್ಥ ವಿದ್ಯಾಲಯದಲ್ಲಿ ಅಯೋಧ್ಯಾ ಬಾಲರಾಮ ಮಂದಿರ ಉದ್ಘಾಟನೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ಅದಮಾರು ಮಠಾಧೀಶ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ಶ್ರೀರಾಮಚಂದ್ರ ಅಂದು ಎಷ್ಟು ಪ್ರಸ್ತುತನೋ ಇಂದು, ಮುಂದು, ಎಂದೆಂದೂ ಅಷ್ಟೇ ಪ್ರಸ್ತುತ. ಅವನ ಆದರ್ಶ ಗುಣಗಳಿಂದ ಅವನು ಸದಾಕಾಲಕ್ಕೂ ಶ್ರೇಷ್ಠನಾಗಿರುತ್ತಾನೆ. ಇಂದು ಬರೀ ಮಾತಿನಿಂದ ಶ್ರೀರಾಮಚಂದ್ರನ ಆದರ್ಶದ ಬಗ್ಗೆ ಹೇಳಲು ಸಾಧ್ಯವೇ ಹೊರತು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಅದೊಂದು ತಪಸ್ಸಿನಂತೆ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಂದ ರಾಮತಾರಕ ಜಪ ಕಾರ್ಯಕ್ರಮ ನಡೆಯಿತು. ಉಡುಪಿ ಸಂಸ್ಕೃತ ಕಾಲೇಜಿನ ಉಪಪ್ರಾಂಶುಪಾಲ ಷಣ್ಮುಗ ಹೆಬ್ಬಾರ್ ಸಮಗ್ರ ರಾಮಾಯಣದ ಬಗ್ಗೆ ಉಪನ್ಯಾಸ ನೀಡಿ, ಇಂದಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿದೆ. ಯಾವುದೇ ಕಷ್ಟದ ಸಂದರ್ಭದಲ್ಲಿ ಅದನ್ನು ಎದುರಿಸಿ ನಿಲ್ಲುವ ಮನೋಭಾವನೆ ಇಲ್ಲದಾಗಿದೆ. ಎಂತಹದ್ದೇ ಕಷ್ಟ ಇದ್ದರೂ ಅದನ್ನು ಎದುರಿಸುವ ಮನಸ್ಸು ಬರಬೇಕಾದರೆ ಮೊದಲು ಸಹನೆಯನ್ನು ಬೆಳೆಸಿಕ್ಕೊಳ್ಳಬೇಕು. ಶ್ರೀರಾಮಚಂದ್ರ ಸಹನಾಮೂರ್ತಿ, ಅವನ ಸಹನೆ ತಾಳ್ಮೆ ಇಂದಿನ ಯುವ ಸಮುದಾಯದಲ್ಲಿ ಬೆಳೆಯಲಿ ಎಂದರು. ಆಡಳಿತ ಮಂಡಳಿ ಕಾರ್ಯದರ್ಶಿ ಸುಬ್ರಹ್ಮಣ್ಯ ಸಾಮಗ, ಖಜಾಂಜಿ ಲಕ್ಷ್ಮೀನಾರಾಯಣ ಉಪಾಧ್ಯ, ಪ್ರಾಂಶುಪಾಲ ಡಾ. ಗೀತಾ ಶಶಿಧರ್, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.