ಮಣಿಪಾಲ, ನ.4: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಉಡುಪಿ ಹಾಗೂ ಮಕ್ಕಳ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ಇವರ ಸಹಯೋಗದೊಂದಿಗೆ ಸರ್ಕಾರಿ ವೈದ್ಯರಿಗೆ ಮಕ್ಕಳ ರೋಗ ಚಿಕಿತ್ಸೆಯ ಇತ್ತೀಚಿನ ವಿಧಾನಗಳ ಕುರಿತು ಮಣಿಪಾಲದ ಇಂಟರ್ಯಾಕ್ಟ್ ಸಭಾಂಗಣದಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಂ.ಸಿ. ಮಣಿಪಾಲದ ಸಹ ಡೀನ್ ಡಾ. ಕಾಂತಿಲತಾ ಪೈ, ಅವರು ವೈದ್ಯಕೀಯ ಚಿಕಿತ್ಸೆಗಳ ಇತ್ತೀಚಿನ ಕೌಶಲ್ಯಗಳು ಹಾಗೂ ಮಾರ್ಗದರ್ಶನಗಳನ್ನು ಪದೇ ಪದೇ ಅವಲೋಕಿಸಿ ತರಬೇತಿ ಪಡೆಯುವ ಮೂಲಕ ಸಮುದಾಯದ ಜನರ ಬಹುತೇಕ ಕಾಯಿಲೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲು ತುಂಬಾ ಸಹಕಾರಿಯಾಗಿದೆ ಹಾಗೂ ಇಂತಹ ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲೆಯ ಆರ್. ಸಿ. ಹೆಚ್. ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಅವರ ವಾಸಸ್ಥಾನದ ಸಮೀಪದಲ್ಲೇ ಉತ್ತಮ ಗುಣಮಟ್ಟದ ಸೇವೆ ನೀಡಲು ಇಂತಹ ತರಬೇತಿ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿದೆ ಹಾಗೂ ಇದರಿಂದ ಶಿಶು ಮರಣ ಪ್ರಮಾಣ ಕಡಿಮೆ ಮಾಡಲು ಮತ್ತು ಮಕ್ಕಳ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಆಶಿಸಿದರು.
ಕರ್ನಾಟಕ ಸರಕಾರಿ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರಾದ ಡಾ. ನಾಗೇಶ್ ಮಾತನಾಡಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನೊಂದಿಗೆ ತಮ್ಮ ಇಲಾಖೆ ಹಾಗೂ ಸಂಘವು ಹೊಂದಿರುವ ಉತ್ತಮ ಬಾಂಧವ್ಯದಿಂದಾಗಿ ಸರ್ಕಾರಿ ವೈದ್ಯಾಧಿಕಾರಿಗಳಿಗೆ ಹಲವಾರು ವಿಷಯಗಳ ಬಗ್ಗೆ ತರಬೇತಿ ನೀಡಲು ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕೆ.ಎಂ.ಸಿ. ಮಣಿಪಾಲದ ಪಿಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೋಲಜಿ ವಿಭಾಗ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ., ಕೆ.ಎಂ.ಸಿ. ವೀಕ್ಷಕರಾದ ಡಾ. ಸಂದೀಪ್, ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಲೆಸ್ಲಿ ಎಡ್ವರ್ಡ್ ಎಸ್. ಲೂಯಿಸ್., ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಸುಮಾರು 110 ವೈದ್ಯರು ಕ್ರಿಯಾಶೀಲರಾಗಿ ಭಾಗವಹಿಸಿದರು. ಡಾ. ಲೆಸ್ಲಿ ಎಡ್ವರ್ಡ್ ಎಸ್. ಲೂಯಿಸ್ ಸ್ವಾಗತಿಸಿ, ಡಾ. ದಿಶಾ ದಿವಾಕರ ವಂದಿಸಿ, ಡಾ. ಅಫ್ರಾಜ಼್ ಜಹಾನ್ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳ ಚಿಕಿತ್ಸೆಯ ಇತ್ತೀಚಿನ ಕ್ರಮಗಳ ಕುರಿತು ಮಕ್ಕಳ ವಿಭಾಗದಿಂದ ಡಾ. ಪುಷ್ಪಾ ಕಿಣಿ, ಡಾ. ಸುನೀಲ್ ಮುಂಡ್ಕೂರು, ಡಾ. ಸಂದೀಪ್ ಕುಮಾರ್, ಡಾ. ಸಂದೇಶ್ ಕಿಣಿ, ಡಾ. ಕರೆನ್ ಮೊರಾಸ್, ಡಾ. ಕೌಶಿಕ್ ಉರಾಳ್, ಡಾ. ಅಮೃತಾವರ್ಶಿಣಿ, ಡಾ. ಎ.ವಿ. ಬಾಳಿಗಾ ಮೆಮೊರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಹಾಗೂ ಮೂತ್ರಪಿಂಡ ಶಾಸ್ತ್ರ ವಿಭಾಗದ ಡಾ. ದರ್ಶನ್ ಆರ್. ಅವರು ಮಾಹಿತಿ ನೀಡಿದರು. ಗುಂಪು ಚರ್ಚೆಯಲ್ಲಿ ಮಕ್ಕಳ ವಿಭಾಗದ ಯುನಿಟ್ ಮುಖ್ಯಸ್ಥರಾದ ಡಾ. ಶ್ರೀಕಿರಣ್ ಹೆಬ್ಬಾರ್, ಡಾ. ರಮೇಶ್ ಭಟ್, ಸಮುದಾಯ ವೈದ್ಯಕೀಯ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್, ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ್ ಹೆಬ್ಬಾರ್ ಮತ್ತು ಉಡುಪಿ ಆರ್. ಸಿ. ಹೆಚ್. ಅಧಿಕಾರಿ ಡಾ. ಪ್ರಶಾಂತ್ ಭಟ್ ಭಾಗವಹಿಸಿದರು. ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಲೆಸ್ಲಿ ಎಡ್ವರ್ಡ್ ಎಸ್. ಲೂಯಿಸ್ ಗುಂಪು ಚರ್ಚೆ ನಡೆಸಿಕೊಟ್ಟರು.