Home ಸುದ್ಧಿಗಳು ಪ್ರಾದೇಶಿಕ ಹಿಜಾಬ್ ವಿವಾದ- ಸಮವಸ್ತ್ರ / ವಸ್ತ್ರ ಸಂಹಿತೆ ಯಥಾಸ್ಥಿತಿ ಮುಂದುವರಿಸಲು ಸರ್ಕಾರ ಆದೇಶ

ಹಿಜಾಬ್ ವಿವಾದ- ಸಮವಸ್ತ್ರ / ವಸ್ತ್ರ ಸಂಹಿತೆ ಯಥಾಸ್ಥಿತಿ ಮುಂದುವರಿಸಲು ಸರ್ಕಾರ ಆದೇಶ

816
0

ಉಡುಪಿ: ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರ ಮತ್ತು ಹಿಜಾಬ್ ಧರಿಸುವ ಬಗೆಗಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಥವಾ ವಸ್ತ್ರಸಂಹಿತೆಯನ್ನು ನಿಗಧಿಗೊಳಿಸುವ ಕುರಿತು ಚಿಂತನ ಮಂಥನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿ ಅಧ್ಯಯನ ನಡೆಸಿ ಸಲ್ಲಿಸಲಾಗುವ ಶಿಫಾರಸ್ಸುಗಳನ್ನು ಪರಿಶೀಲಿಸಿದ ನಂತರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ.

ಈ ಪಕ್ರಿಯೆ ಆಗುವವರೆಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ತನ್ನ ಸಂಸ್ಥೆಯ ಹಂತದಲ್ಲಿ ವಿದ್ಯಾರ್ಥಿನಿಯರಿಗೆ ನಿಗಧಿಗೊಳಿಸಿರುವ ಸಮವಸ್ತ್ರ /ವಸ್ತ್ರ ಸಂಹಿತೆಯ ವಿಷಯದಲ್ಲಿ ಯಥಾಸ್ಥಿತಿಯನ್ನು ಮುಂದುವರೆಸಲು ಸರ್ಕಾರಿ ಆದೇಶ ಸಂಖ್ಯೆ :ಇಪಿ/14/ಎಸ್ ಹೆಚ್ ಹೆಚ್ / 2022 ರಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶವನ್ನು ಪಾಲಿಸಿ ಯಾವುದೇ ಗೊಂದಲಗಳಿಗೆ ಅವಕಾಶವನ್ನು ನೀಡದೆ ಶೈಕ್ಷಣಿಕ ಹಿತದೃಷ್ಟಿಯಿಂದ ಎಲ್ಲರೂ ಸಮಾನತೆಯಿಂದ ತರಗತಿಗಳಿಗೆ ಹಾಜರಾಗುವಂತೆ ಶಾಸಕ ಕೆ. ರಘುಪತಿ ಭಟ್ ಮನವಿ ಮಾಡಿದ್ದಾರೆ.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಇಲ್ಲಿ 1985 ರಿಂದಲೂ ಸಮವಸ್ತ್ರ/ವಸ್ತ್ರ ಸಂಹಿತೆ ಪದ್ಧತಿ ಜಾರಿಯಲ್ಲಿತ್ತು.

ಈ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ವೇಳೆಯಲ್ಲಿ ಕಾಲೇಜು ನಿಗಧಿ ಮಾಡಿದ ಸಮವಸ್ತ್ರ/ ವಸ್ತ್ರಸಂಹಿತೆ ಕುರಿತು ಮಾಹಿತಿ ಇದ್ದು ಅದನ್ನು ಒಪ್ಪಿಯೇ ಸ್ವ-ಇಚ್ಛೆಯಿಂದ ಕಾಲೇಜಿಗೆ ದಾಖಲಾತಿಯನ್ನು ಪಡೆದಿರುತ್ತಾರೆ. ಆದರೆ ಪ್ರಸ್ತುತ ಈ ಕಾಲೇಜಿನ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಬಗ್ಗೆ ಗೊಂದಲವನ್ನುಂಟು ಮಾಡಿರುವುದರಿಂದ ಈ ಬಗ್ಗೆ ಸರ್ಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಲಾಗಿತ್ತು.

ಸರ್ಕಾರಿ ಆದೇಶಕ್ಕೆ ಸಂಬಂಧಿಸಿದಂತೆ ಇಂದು ಶಾಸಕ ಕೆ ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿನ ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಪೋಷಕರನ್ನೊಳಗೊಂಡ ಶಿಕ್ಷಣ ಸೇವಾ ಸಮಿತಿಯ ಜಂಟಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ತರಗತಿಗೆ ಹಾಜರಾಗಬೇಕೆಂದು ನಿರ್ಣಯಿಸಲಾಯಿತು. ಇದಕ್ಕೆ ಮಕ್ಕಳ ಪೋಷಕರನ್ನು ಒಳಗೊಂಡ ಸಮಿತಿಯ ಸದಸ್ಯರು ಬೆಂಬಲವನ್ನು ಸೂಚಿಸಿದರು.

ಪ್ರಸ್ತುತ ಕೇವಲ ಆರು ಮಕ್ಕಳ ಅಶಿಸ್ತಿನ ವರ್ತನೆಯಿಂದಾಗಿ ಕಾಲೇಜಿನಲ್ಲಿರುವ 1000 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕು ಉಂಟಾಗುತ್ತಿದೆ. ಆದ್ದರಿಂದ ಸರಕಾರದ ಆದೇಶದಂತೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜಾರಾಗುವುದು. ಈ ಬಗ್ಗೆ ಮಕ್ಕಳ ಪೋಷಕರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.