Home ಅಂಕಣ ಗಣರಾಜ್ಯೋತ್ಸವದ ಮಹತ್ವ

ಗಣರಾಜ್ಯೋತ್ಸವದ ಮಹತ್ವ

536
0

ನವರಿ 26 ಭಾರತಕ್ಕೆ, ಭಾರತೀಯರಿಗೆ ಅತ್ಯಂತ ಪವಿತ್ರ ದಿನ. ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯದ ಹಬ್ಬಕ್ಕಿಂತ ಹೆಚ್ಚು ಮುಖ್ಯವಾದುದು. ಆಗಸ್ಟ್ 15,1947 ರಂದು ಬ್ರಿಟಿಷರು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಿದಾಗ ನಮಗೆ ಪೂರ್ಣ ಪ್ರಮಾಣದ ಸ್ವರಾಜ್ಯವು ಸಿಕ್ಕಿರಲಿಲ್ಲ. ಆ ದಿನದಲ್ಲಿ ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ದೊರೆತಿತ್ತು.

1947-1950ರ ಅವಧಿಯಲ್ಲಿ ಭಾರತವನ್ನು ರಿಪಬ್ಲಿಕ್ ದೇಶ ಎಂದು ಕರೆಯದೆ ‘ಡೊಮಿನಿಯನ್ ರಿಪಬ್ಲಿಕ್’ ಹೆಸರಿನಿಂದ ಕರೆಯುತ್ತಿದ್ದರು. 1947ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತದಿಂದ ಪೂರ್ಣವಾಗಿ ನಿರ್ಗಮಿಸಿರಲಿಲ್ಲ. ಭಾರತದ ಮೇಲೆ ದಟ್ಟವಾದ ವಸಾಹತುಶಾಹಿಯ ನೆರಳು ಇನ್ನೂ ಉಳಿದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶಕ್ಕೆ ನಮ್ಮದೆ ಆದ ಸಂವಿಧಾನವು ದೊರೆತಿರಲಿಲ್ಲ. ಆ ಅರ್ಥದಲ್ಲಿ ಭಾರತವು ಪರಿಪೂರ್ಣವಾಗಿ ಸ್ವಾತಂತ್ರ್ಯ ಪಡೆದದ್ದು ಜನವರಿ 26, 1950ರಂದು ಎಂದು ಖಂಡಿತ ಹೇಳಬಹುದು!

ಇಂದಿನ ದಿನ ನೆನಪಿಸಿಕೊಳ್ಳಬೇಕಾದ ಮೊದಲನೆಯ ಹೆಸರು ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್. ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ರಚನಾ ಸಮಿತಿಯಲ್ಲಿ ಹಲವು ಪ್ರಮುಖರು ಇದ್ದರು. ಅದರಲ್ಲಿ ಒಬ್ಬರು ಬೆನೆಗಲ್ ನರಸಿಂಗ ರಾಯರು ನಮ್ಮ ಕರಾವಳಿ ಕರ್ನಾಟಕದವರು ಮತ್ತು ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಓದಿದವರು (ಅವರ ಬಗ್ಗೆ ಇನ್ನೊಮ್ಮೆ ಬರೆಯುವೆ).

ಇತರ ಸದಸ್ಯರು ಪಂಡಿತ್ ಕೆ.ಎಂ. ಮುನಿಷಿ, ಗೋಪಾಲ ಸ್ವಾಮಿ ಅಯ್ಯಂಗಾರ್, ಅಲಾಡಿ ಕೃಷ್ಣ ಅಯ್ಯರ್, ಸಯ್ಯದ್ ಮೊಹಮ್ಮದ್ ಸಾದುಲ್ಲ, ಪಂಡಿತ ಶ್ರೇಷ್ಠ ಮಾಧವ ರಾವ್ ಮೊದಲಾದವರು. ಎಲ್ಲರೂ ಅತೀ ಶ್ರೇಷ್ಠವಾದ ಕಾನೂನು ವಿದ್ವಾಂಸರೇ ಆಗಿದ್ದವರು.

ಈ ಸದಸ್ಯರು 2 ವರ್ಷ, 11 ತಿಂಗಳು, 18 ದಿನ ಅಹರ್ನಿಶಿ ದುಡಿದು ಸಿದ್ಧಪಡಿಸಿದ ಸಂವಿಧಾನ ನಮ್ಮದು! ಜಗತ್ತಿನ ಎಲ್ಲಾ ರಾಷ್ಟ್ರಗಳ ಸಾರ ಸರ್ವಸ್ವವನ್ನೂ ಹೀರಿ ಬೆಳೆದ ಸಂವಿಧಾನವು ನಮ್ಮದು! ಅಂಬೇಡ್ಕರ ಅವರು ಎಲ್ಲಾ ರಾಷ್ಟ್ರಗಳ ಸಂವಿಧಾನಗಳನ್ನು ಅಭ್ಯಾಸ ಮಾಡಿದ್ದ ಕಾರಣ ಅದು ಸಾಧ್ಯವಾಗಿತ್ತು.

ಜಗತ್ತಿನ ಅತ್ಯಂತ ದೊಡ್ಡದಾದ ಮತ್ತು ಅತೀ ವಿಸ್ತಾರವಾದ ಸಂವಿಧಾನ ನಮ್ಮದು! ನಮ್ಮ ಮೂಲ ಸಂವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಎರಡು ಪ್ರತ್ಯೇಕವಾದ ಆವೃತ್ತಿಗಳಲ್ಲಿ ಕೈ ಬರಹದಲ್ಲಿ ಬರೆಯಲಾಗಿದೆ. ಅದನ್ನು ಇನ್ನೂ ಪ್ರಿಂಟ್ ಮಾಡಿಲ್ಲ.

ಅದನ್ನು ಸುಂದರ ಕೈ ಬರಹದಲ್ಲಿ ಬರೆದು ಮುಗಿಸಿದವರು ಪ್ರೇಮ್ ಬಿಹಾರಿ ನರೇನ್ ರೈಜ್ದಾ ಎಂಬವರು! ಇಂಗ್ಲಿಷ್ ಆವೃತ್ತಿಯಲ್ಲಿ 1,17,369 ಶಬ್ದಗಳು ಇವೆ! ಅದನ್ನು ಸುಂದರ ಇಟಾಲಿಕ್ ಶೈಲಿಯಲ್ಲಿ ಪ್ರೇಮ್ ಬಿಹಾರಿ ನರೇನ್ ಬರೆದು ಮುಗಿಸಿದರು ಅಂದರೆ ಅವರ ತಾಳ್ಮೆ ಮತ್ತು ಬದ್ದತೆಗಳು ಎಷ್ಟಿರಬೇಡ?

ನಮ್ಮ ಸಂವಿಧಾನದ ಮೂಲ ಪ್ರತಿಗಳನ್ನು ಈಗಲೂ ದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ಹೀಲಿಯಂ ತುಂಬಿದ ಪಾತ್ರೆಯಲ್ಲಿ ಸಂಗ್ರಹಿಸಿ ಇಡಲಾಗಿದೆ. ದೆಹಲಿಗೆ ಹೋದವರು ಇದನ್ನು ನೋಡಲೇಬೇಕು. ಅದರಲ್ಲಿ ರವೀಂದ್ರನಾಥರ ಕೋಲ್ಕತ್ತಾದ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದ ಸುಂದರವಾದ ವರ್ಣ ಚಿತ್ರಗಳು ತುಂಬಾ ಅದ್ಭುತವಾಗಿವೆ.

ಅದರಲ್ಲಿ 448 ವಿಧಿಗಳು, 22 ಭಾಗಗಳು, 12 ಅತ್ಯಂತ ದೀರ್ಘವಾದ ಶೆಡ್ಯೂಲುಗಳು ಇರುವ ವಿಶಾಲ ಆಶಯದ ಸಂವಿಧಾನ ನಮ್ಮದು! ನಮ್ಮ ಸಂವಿಧಾನವು ಜಾರಿ ಆಗುವ ಮೊದಲೇ ಅದರಲ್ಲಿ 2000ರಷ್ಟು ತಿದ್ದುಪಡಿಗಳನ್ನು ಮಾಡಲಾಗಿತ್ತು.

ಅದರ ಅಂತಿಮ ಕರಡು ಪೂರ್ಣ ಆದದ್ದು 26 ನವಂಬರ್ 1949ರಂದು. 24 ಜನವರಿ 1950ರಂದು ಅದಕ್ಕೆ ಆಗಿನ ಕಾಲದ 284 ಶಾಸಕಾಂಗ ಸದಸ್ಯರು ಸಹಿ ಮಾಡಿದ್ದರು. 26 ಜನವರಿ 1950ರಂದು ನಮ್ಮ ಅತೀ ಪವಿತ್ರ ಸಂವಿಧಾನಕ್ಕೆ ಪಾರ್ಲಿಮೆಂಟ್ ಅಂಗೀಕಾರ ನೀಡಿತು. ಅಂದೇ ಭಾರತದ ರಾಷ್ಟ್ರೀಯ ಲಾಂಛನವನ್ನು ಅಂಗೀಕಾರ ಮಾಡಲಾಯಿತು. ಈ ಐತಿಹಾಸಿಕ ಘಟನೆಗೆ ಇಂದು ಎಪ್ಪತ್ತೆರಡು ವರ್ಷಗಳು ಸಂದಿವೆ.

ನಮ್ಮ ದೇಶದ ಸಂವಿಧಾನವು ಅತ್ಯಂತ ಪವಿತ್ರವಾದದ್ದು. ಅದು ತನ್ನ ದೇಶದ ನಾಗರಿಕರಿಗೆ LIBERTY (ಸ್ವಾತಂತ್ರ್ಯ), JUSTICE (ನ್ಯಾಯ) ಮತ್ತು EQUALITY (ಸಮಾನತೆ) ಎಂಬ ಮೂರು ಅದ್ಭುತವಾದ ಮೂಲ ತತ್ವಗಳನ್ನು ನೀಡಿದೆ. ಸಹೋದರತೆ, ಗೌರವ, ಐಕ್ಯತೆ, ಅಖಂಡತೆ ಮೊದಲಾದ ಉತ್ತಮ ಅಂಶಗಳನ್ನು ಹೆಚ್ಚು ಪ್ರಮೋಟ್ ಮಾಡುತ್ತಿದೆ. ವಸುಧೈವ ಕುಟುಂಬಕಂ ಎಂಬ ನಮ್ಮ ಆರ್ಷೇಯ ವಾಕ್ಯಕ್ಕೆ ಹೆಚ್ಚು ಒತ್ತು ನೀಡಿದೆ.

ಆದರೆ ಮುಂದೆ ಅಧಿಕಾರಕ್ಕೆ ಬಂದ ಅನೇಕ ಸರಕಾರಗಳು ತಮ್ಮ ಸ್ವಾರ್ಥ ಸಾಧನೆಗೆ ಬೇಕಾಗಿ ಮತ್ತು ತುಷ್ಟೀಕರಣ ನೀತಿಯಿಂದ ಅದೇ ಸಂವಿಧಾನಕ್ಕೆ ಇದುವರೆಗೆ 115 ತಿದ್ದುಪಡಿಗಳನ್ನು ಮಾಡಿದವು! ಇದರಿಂದ ದೇಶದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಎರಡೂ ಆಗಿವೆ. ಇವುಗಳ ಹಿನ್ನೆಲೆಯಲ್ಲಿ 1953ರ ಹೊತ್ತಿಗೆ ಸಿಟ್ಟು ಮಾಡಿದ ಸ್ವತಃ ಸಂವಿಧಾನದ ಶಿಲ್ಪಿ ಆಗಿದ್ದ ಅಂಬೇಡ್ಕರ್ ಅವರು ‘ನನ್ನ ಸಂವಿಧಾನವನ್ನು ನಾನೇ ಸುಟ್ಟು ಹಾಕುವೆ’ ಎಂದು ಗುಡುಗಿದ್ದು ಕೂಡ ಇದೆ!

ಏನಿದ್ದರೂ ಡೊಮಿನಿಯನ್ ರಿಪಬ್ಲಿಕ್ ಆಗಿದ್ದ ಭಾರತವನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಗಿ ಪರಿವರ್ತನೆ ಮಾಡಿದ ನಮ್ಮ ಸಂವಿಧಾನಕ್ಕೆ ನಾವು ತಲೆ ಬಾಗೋಣ. ಜೈ ಹಿಂದ್.

-ರಾಜೇಂದ್ರ ಭಟ್ ಕೆ. (ರಾಷ್ಟ್ರಮಟ್ಟದ ವಿಕಸನ ತರಬೇತುದಾರರು)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.