ಕಲ್ಯಾಣಪುರ, ಜು. 28: ರಸಾಯನಶಾಸ್ತ್ರವು ನಿರಂತರ ಅಧ್ಯಯನ ಮತ್ತು ಅಧ್ಯಾಪನಕ್ಕೆ ಪೂರಕವಾಗಿದ್ದು, ಬೋಧನಾ ಅಭ್ಯಾಸ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ ಎಂದು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಾರುತಿ ಹೇಳಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಸಹಭಾಗಿತ್ವದ ಕಲ್ಯಾಣಪುರದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಸಾಯನಶಾಸ್ತ್ರದ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂಶುಪಾಲರಾದ ಸ್ಟ್ಯಾನಿ ಲೋಬೋ ಮಾತನಾಡುತ್ತಾ, ಉತ್ತಮ ಬೋಧನೆಯಲ್ಲಿ ಇಂತಹ ಕಾರ್ಯಗಾರವು ವಿಶೇಷ ಪಾತ್ರವನ್ನು ವಹಿಸುತ್ತದೆ. ವಿಷಯದ ಕುರಿತು ಆಳವಾದ ಅರಿವನ್ನು ತಿಳಿಯಲು ಇಂತಹ ಕಾರ್ಯಗಾರ ಸಹಕಾರಿಯಾಗುತ್ತದೆ ಎಂದರು. ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಆದರ್ಶ ಎಂ ಕೆ. ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷರಾದ ಪಿ ವಸಂತ್ ಆಚಾರ್ ಮಾತನಾಡಿ, ವಿನೂತನ, ಪ್ರಯೋಗಾತ್ಮಕ, ನಿರಂತರ ಬೋಧನೆಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆಯನ್ನು ಸೃಷ್ಟಿಸುತ್ತದೆ ಎಂದರು. ವೇದಿಕೆಯಲ್ಲಿ ಯು. ಎಲ್. ಭಟ್, ಮಂಜುನಾಥ್ ಭಟ್ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕರಾದ ಸುಧಾಕರ ಐಡಿ ಕಾರ್ಯಕ್ರಮ ನಿರೂಪಿಸಿದರು.