ಕೋಟ, ಏ. 15: ಬದುಕಿನಲ್ಲಿ ಕನಸು ಕಾಣುವುದರ ಜೊತೆ ಜೊತೆಯಲ್ಲಿ ನನಸಾಗಿಸಿಕೊಳ್ಳುವ ಸಂಕಲ್ಪ ಬಹು ಮುಖ್ಯ. ಇದಕ್ಕಾಗಿ ನಮ್ಮಲ್ಲಿನ ಗುರಿ ನಿಶ್ಚಯವಾಗಿದ್ದು ಶ್ರಮದ ಅಗತ್ಯತೆಯಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರ್ಯಕ್ರಮದ ಆಯೋಜನೆಗೆ ಥೀಮ್ ಪಾರ್ಕ್ ನಲ್ಲಿ ನಡೆಸುವ ಕಾರ್ಯ ಶ್ಲಾಘನೀಯ. ಇಂತಹ ಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದು ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ- ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ್ ವಿಕಸನ-2023(ಪರಿವರ್ತನೆಯ ತಂಗಾಳಿ) ನಾಲ್ಕನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪತ್ರಕರ್ತ ರಾಜೇಶ್ ಗಾಣಿಗ, ಸಾಂಸ್ಕೃತಿಕ ಚಿಂತಕ ದಿನೇಶ್ ಆಚಾರ್ಯ ಚೇಂಪಿ, ಚಿತ್ರಕಲಾ ಶಿಕ್ಷಕ ಗಿರೀಶ್ ವಕ್ವಾಡಿ, ಸಾಂಸ್ಕೃತಿಕ ಚಿಂತಕ ಪ್ರದೀಪ್ ಬಸ್ರೂರು, ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ವಡ್ಡರ್ಸೆ, ಕುಮಾರ್, ಶಿಬಿರದ ತಂಡದ ನಾಯಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಶಿಬಿರಾರ್ಥಿಗಳು ನಿರ್ವಹಣೆ ಮಾಡಿದರು.