ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು ಘಟಕ 2ರ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಯಾಗಿರುವ ಸಂತೋಷ್ ನಾಯಕ್ ಮಾತನಾಡುತ್ತಾ, ತಾನು ಬೆಳಗುವುದರೊಂದಿಗೆ ಸಮಾಜವನ್ನು ಬೆಳಗಿಸುವುದೇ ರಾಷ್ಟ್ರೀಯ ಸೇವಾ ಯೋಜನಯ ಆಶಯ.
ಭಾರತದಂತಹ ಸಾಂಪ್ರದಾಯಿಕ ದೇಶದಲ್ಲಿ ಸಮಾಜ ಸುಧಾರಣಾ ಚಳುವಳಿಯ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸವಿದೆ. ಅಪೂರ್ವವಾದ ಸೇವಾ ಪರಂಪರೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಸ್ವಯಂ ಸೇವಾ ಕಾರ್ಯದ ಉಗಮಕ್ಕೆ ಕಾರಣವಾಗಿದೆ.
ಸಹಬಾಳ್ವೆ, ಸಹಜೀವನ, ಸ್ವಾವಲಂಬನೆಯ ಪಾಠ, ಪರಿಸರ ಕಾಳಜಿ, ಸ್ವಚ್ಛತೆ, ತ್ಯಾಗ ಮನೋಭಾವನೆ, ಸಾಮರಸ್ಯ, ಶ್ರಮ ಸಂಸ್ಕೃತಿ ಇತ್ಯಾದಿ ಬದುಕಿನ ಮೌಲ್ಯಗಳನ್ನು ಎನ್.ಎಸ್.ಎಸ್. ವಿದ್ಯಾರ್ಥಿಗಳು ಯುವ ವಯಸ್ಸಿನಲ್ಲಿಯೇ ರೂಪಿಸಿಕೊಂಡು ಸಶಕ್ತ ನಾಗರಿಕರಾಗಿ ದೇಶದ ಬೆಳವಣಿಗೆಗೆ ಮತ್ತು ಕೋವಿಡ್‌ನಂತಹ ತುರ್ತು ಸಂದರ್ಭದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ ಗಾಂವ್ಕರ್ ವಹಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಾಗರಾಜ ವೈದ್ಯ, ಐಕ್ಯೂಎಸಿ ಸಂಚಾಲಕರಾದ ರವಿಪ್ರಸಾದ್ ಏ.ಉರವ, ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಮುರುಳಿ ಎನ್ ಮತ್ತು ಅನಂತಕುಮಾರ್ ಸಿ.ಎಸ್, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರಶಾಂತ್ ನೀಲಾವರ, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು.