Home ಸುದ್ಧಿಗಳು ಪ್ರಾದೇಶಿಕ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಡೊಂಗರಕೇರಿ-ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಡೊಂಗರಕೇರಿ-ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ

6759
0

ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಮಂಗಳೂರು ಇವರು ಕೆನರಾ ಪ್ರೌಢಶಾಲೆ ಡೊಂಗರಕೇರಿ ಮತ್ತು ಕೆನರಾ ಪ್ರೌಢ ಶಾಲೆ ಉರ್ವ ಇಲ್ಲಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಶ್ರೀ ರಮಣ ಪೈ ಸಭಾಭವನದಲ್ಲಿ ನಡೆಯಿತು. ಎರಡು ಪ್ರೌಢಶಾಲೆಗಳ ಅರವತ್ತನಾಲ್ಕು ವಿದ್ಯಾರ್ಥಿಗಳನ್ನು ನಗದು ಬಹುಮಾನವನ್ನು ನೀಡಿ ಅವರ ಹೆತ್ತವರ ಜೊತೆಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ನಗರ ಪೊಲೀಸ್ ಮುಖ್ಯ ಟ್ರಾಫಿಕ್ ವಾರ್ಡನ್ ಪ್ರೊ. ಎಂ. ಎಲ್ ಸುರೇಶನಾಥ್ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತಾ, ಅಂಕಗಳನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಶಿಕ್ಷಣದ ಗುರಿಯಾಗಬಾರದು. ವಿದ್ಯಾರ್ಥಿಗಳನ್ನು ದೇಶ ಸೇವೆಗೆ ಸಜ್ಜಾಗುವಂತೆ ಮಾಡುವುದು ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಯಾಗಿದೆ.

ಸೈನ್ಯಕ್ಕೆ ಸೇರಿ ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಜ್ಞಾನದ ಜೊತೆ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಜೀವನದ ಯಶಸ್ಸು ಸಾಧ್ಯ. ಬರಿಯ ಅಂಕಗಳು ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಅದರ ಜೊತೆ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದುರು.

ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಎಂ.ಎಸ್. ಪೈ& ಕೋ ಇದರ ಆಡಳಿತ ಪಾಲುದಾರರಾಗಿರುವ, ಕೆನರಾ ಸಂಸ್ಥೆಯ ಹಳೆಯ ವಿದ್ಯಾರ್ಥಿ ಆದಿತ್ಯ ಪೈ ಮಾತನಾಡುತ್ತಾ, ಸೃಜನಶೀಲ ವಿದ್ಯಾರ್ಥಿಗಳು ಭಾರತೀಯ ನಾಗರಿಕ ಸೇವೆಗಳ ಕಡೆಗೆ ಗಮನ ಹರಿಸಬೇಕು. ಹೆತ್ತವರು ಮತ್ತು ಶಿಕ್ಷಕರ ಪ್ರೋತ್ಸಾಹ, ವಿದ್ಯಾರ್ಥಿಗಳ ಸತತ ಪ್ರಯತ್ನದಿಂದ ಇಂತಹ ಅವಕಾಶಗಳು ದೊರಕುತ್ತವೆ. ಹೊಸತನವನ್ನು ಹುಡುಕುವ ಸಾಮರ್ಥ್ಯಗಳನ್ನು ನಾವು ಅಂತರ್ಗತಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಕೆನರಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರಂಗನಾಥ ಭಟ್ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ನಮ್ಮ ಸಂಸ್ಥೆಯು ಸದಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹಣಕಾಸಿನ ಕಾರಣದಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ನೈತಿಕ ಮತ್ತು ಬೌದ್ಧಿಕತೆಯನ್ನು ಬೆಂಬಲಿಸುವ ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.

ಕೆನರಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪದ್ಮನಾಭ. ಪೈ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ತಮ್ಮ ತಂದೆ ತಾಯಿಗಳನ್ನು ಸದಾ ಗೌರವಿಸಬೇಕು. ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಬದುಕಿನ ಕಷ್ಟಗಳನ್ನು ಮೆಟ್ಟಿನಿಲ್ಲುವ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಅರುಣಾ ಕುಮಾರಿ ಹಾಗೂ ಕೆನರಾ ಪ್ರೌಢ ಶಾಲೆ ಉರ್ವಾ ಇಲ್ಲಿಯ ಮುಖ್ಯೋಪಾಧ್ಯಾಯಿನಿ ನವಿತಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ರಚನಾ ಕಾಮತ್ ಇವರ ನಿರ್ದೇಶನದಲ್ಲಿ ಪ್ರಾರ್ಥನೆ ನಡೆಯಿತು. ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಇದರ ಸಂಚಾಲಕ ಬಸ್ತಿ ಪುರುಷೋತ್ತಮ ಶೆಣೈ ಸ್ವಾಗತಿಸಿ, ಕೆನರಾ ಪದವಿಪೂರ್ವ ಕಾಲೇಜಿನ ಸಂಚಾಲಕ ಗೋಪಾಲಕೃಷ್ಣ ಶೆಣೈ ವಂದಿಸಿದರು. ಕೆನರಾ ಪ್ರೌಢಶಾಲೆ ಉರ್ವ ಶಿಕ್ಷಕಿ ಲೀನಾ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.