Tuesday, January 21, 2025
Tuesday, January 21, 2025

ಅರ್ಹ ವ್ಯಕ್ತಿಗಳಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅರ್ಹ ವ್ಯಕ್ತಿಗಳಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ: ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಗೆ ಸರಕಾರದ ಸೌಲಭ್ಯಗಳನ್ನು ಲುಪಿಸಿ ಅವರುಗಳ ಬದುಕನ್ನು ಹಸನಗೊಳಿಸಬೇಕು ಎಂಬ ಸದುದ್ದೇಶ ಹೊಂದಿದ್ದೇವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು ನಗರದ ಅಮೃತ್ ಗಾರ್ಡನ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ‘ಅಂತ್ಯೋದಯ’ ಇಲಾಖೆಗಳ ವಿವಿಧ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ.ಜಾತಿ ಮತ್ತು ಪ.ಪಂಗಡ ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗೆ, ಅನೇಕ ಕಲ್ಯಾಣ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸರಕಾರ ಜಾರಿಗೆ ತಂದಿದ್ದು, ಇವುಗಳನ್ನು ಪಾರದರ್ಶಕವಾಗಿ ಯಾವುದೇ ಮದ್ಯವರ್ತಿಗಳ ಹಾವಳಿ ಇಲ್ಲದೇ ಸಮಾಜದ ಕಟ್ಟಕಡೆಯ ಕಡುಬಡವರಿಗೆ ತಲುಪಿಸಿ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದರು.

ಇಂದಿನ ಕಾರ್ಯಾಗಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಮತ್ತು ಅವುಗಳ ಆಯ್ಕೆಗಳ ಮಾನದಂಡ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದ ಅವರು ಜನಪ್ರತಿನಿಧಿಗಳು ಸಮಾಜದ ಕಡೆಯ ಅರ್ಹ ವ್ಯಕ್ತಿಗಳಿಗೆ ಯೋಜನೆಗಳ ಫಲಾನುಭವಿಗಳನ್ನಾಗಿಸಬೇಕು ಎಂದರು.

ರಾಜ್ಯದ ಜನಸಂಖ್ಯೆಯಲ್ಲಿ ಶೇ. 50 ರಷ್ಟು ಹಿಂದುಳಿದ ವರ್ಗದವರು, 1.27 ಕೋಟಿ ಪ.ಜಾತಿ ಮತ್ತು 42 ಲಕ್ಷದಷ್ಟು ಪ.ಪಂಗಡದ ಜನರಿದ್ದಾರೆ. ಸರ್ಕಾರ ಆಯವ್ಯಯದಲ್ಲಿ ಪ.ಜಾತಿಗೆ 15 ಸಾವಿರ ಕೋಟಿ, ಪ.ಪಂಗಡಕ್ಕೆ 8 ಸಾವಿರ ಕೋಟಿ ಹಾಗೂ ಹಿಂದುಳಿದ ವರ್ಗದವರಿಗೆ 3,500 ಕೋಟಿ ರೂಗಳ ಅನುದಾನವನ್ನು ಅವರ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಿ ಅನುಷ್ಠಾನಗೊಳಿಸಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ. 3ಎ. 3ಬಿ, ಪಟ್ಟಿಗೆ ಯಾವೆಲ್ಲಾ ಜಾತಿಗಳನ್ನು ಸೇರಿಸಬೇಕೆಂಬ ಮನವಿಗಳು ಬಂದಾಗ, ಅವರಿಂದ ಮಾಹಿತಿಗಳನ್ನು ಪಡೆದು ಅವರುಗಳು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯನ್ನು ಪರಿಶೀಲಿಸಿ ವರದಿಯನ್ನು ಸರಕಾರಕ್ಕೆ ನೀಡುವ ಕಾರ್ಯವನ್ನು ಆಯೋಗ ಮಾಡುತ್ತದೆ. ಸರಕಾರ ಇದರ ಬಗ್ಗೆ ನಿರ್ಧರಿಸುತ್ತದೆ ಎಂದರು.

ಹಿಂದುಳಿದ ವರ್ಗದವರಿಗೆ ರಾಜಕೀಯ ಮೀಸಲಾತಿಯನ್ನು ಒದಗಿಸುವ ಅಧಿಕಾರ ಇರುವುದಿಲ್ಲಾ, ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ನೀಡಲು ಮಾತ್ರ ಸಂವಿಧಾನ ಅವಕಾಶ ನೀಡಿದೆ ಎಂದರು.

ಆಯೋಗವು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಹಾಗೂ ಮತ್ತಿತರ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವ ಅವಕಾಶ ಕಲ್ಪಿಸಿದೆ ಎಂದ ಅವರು ಶೀಘ್ರದಲ್ಲಿಯೇ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ಹಿಂದುಳಿದ ವರ್ಗಗಳಿಗೆ ಯಾವೆಲ್ಲಾ ಜಾತಿಗಳು ಸೇರಿವೆ ಎಂಬ ಪಟ್ಟಿಯ ಪುಸ್ತಕವನ್ನು ಕಳುಹಿಸಿಕೊಡಲಾಗುವುದು, ಇದರಿಂದ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಅನ್ಯ ಜಾತಿಗಳನ್ನು ಪ.ಜಾತಿ/ಪ.ಪಂಗಡಗಳಿಗೆ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರಕಾರ ಈ ಬಗ್ಗೆ ಶಿಫಾರಸ್ಸು ಮಾಡಬಹುದಾಗಿದೆ, ಎಂದ ಅವರು ಕುಡುಬಿ ಜನಾಂಗದವರು ಪ.ಪಂಗಡಗಳ ವರ್ಗಕ್ಕೆ ಸೇರಲು ಅರ್ಹರಿದ್ದಾರೆ. ರಾಜ್ಯ ಸರಕಾರದ ಮುಂದಿರುವ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರದ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಇಲಾಖೆಗಳು ಮಾಡಬೇಕು. ಯೋಜನೆಗಳು ಹಾಗೂ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ವೈ ಪ್ರಾಸ್ತಾವಿಕವಾಗಿ ಮತ್ತು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರವಿಕುಮಾರ್ ಸುರಪುರ, ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತ ವಸಂತ್ ಕುಮಾರ್, ಕರ್ನಾಟಕ ವಸತಿ ಸಂಸ್ಥೆಗಳ ಸಂಘಗಳ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದೇಶ್ವರ ಎಂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!