ಬ್ರಹ್ಮಾವರ: ಚೈತನ್ಯ ಯುವಕ ಮಂಡಲ (ರಿ.) ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೈತನ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವದ ಸಮಾರಂಭವನ್ನು ನೀಲಾವರ ದೇವಸ್ಥಾನದ ಮನಸ್ವಿನಿಯಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ರಘುರಾಮ ಮಧ್ಯಸ್ಥ ಮಾತನಾಡಿ, ಯುವಜನತೆ ಮಾತೃಭಾಷೆ ಕನ್ನಡಡದ ಕುರಿತಾಗಿ ವಾತ್ಸಲ್ಯ ಮತ್ತು ಅಭಿಮಾನದ ಭಾವನೆ ಮೂಡಿದಲ್ಲಿ ಮಾತ್ರ ಕನ್ನಡದ ಉಳಿವು ಬೆಳವಣಿಗೆ ಸಾಧ್ಯ. ಗ್ರಾಮೀಣ ಪರಿಸರದಲ್ಲಿ ಕನ್ನಡ ಜೀವಂತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್ ರಾಜ್ಯೋತ್ಸವದ ಆಚರಣೆಯನ್ನು ಪ್ರತಿಯೊಂದು ಯುವಕ ಯುವತಿ ಮಂಡಲಗಳು ಹಾಗೂ ಸಂಘ ಸಂಸ್ಥೆ ಗಳು ಆಚರಿಸುವಂತಾಗಬೇಕೆಂದರು.
ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಸುಧೀರ್ ಕುಮಾರ ಶೆಟ್ಟಿ, ನೀಲಾವರ ಗ್ರಾಮ ಪಂಚಾಯತ್ ಸದಸ್ಯರಾದ ಶಿಲ್ಪಾ ಹರೀಶ್ ರಾವ್, ಸುಮಾ ದೇವಾಡಿಗ, ಬ್ರಹ್ಮಾವರ ರೋಟ್ರಾಕ್ಟ್ ಅಧ್ಯಕ್ಷರಾದ ಕಾರ್ತಿಕ್ ಬಾಸ್ರಿ, ಯುವಕ ಮಂಡಲದ ಉಪಾಧ್ಯಕ್ಷ ರಾಘವೇಂದ್ರ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭ ಕಳೆದ ಶೈಕ್ಷಣಿಕ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ನೀಲಾವರ ಗ್ರಾಮಕ್ಕೆ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ದಿವ್ಯಾ ಎಸ್ ನಾಯಕ್ ಅವರಿಗೆ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುವಕ ಮಂಡಲದ ಕಾರ್ಯದರ್ಶಿ ಹರೀಶ್ ಆಚಾರ್ಯ ಯುವಕ ಸಂಘದ ವಾರ್ಷಿಕ ವರದಿ ವಾಚಿಸಿದರು. ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಪಾದ ರಾವ್ ಸ್ವಾಗತಿಸಿ, ಅಭಿಷೇಕ್ ವಂದನಾರ್ಪಣೆಗೈದರು. ಖಜಾಂಚಿ ಮಧುಸೂದನ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಬೈಕಾಡಿಯ ಮಂದಾರ ತಂಡದವರಿಂದ ಸಂಕಥನ ಸಣ್ಣ ಕಥೆಗಳ ದ್ರಶ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಚೈತನ್ಯದ ಸದಸ್ಯರು ಸಹಕರಿಸಿದರು.