ಉಡುಪಿ: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವುದರ ಮೂಲಕ ಹಿರಿಯ ವ್ಯಕ್ತಿಗಳು ಕೋವಿಡ್ ಗೆ ಬಲಿಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ..ಜಗದೀಶ್ ಸೂಚಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಜಿಲ್ಲಾ ಪರಿಣಿತರ ಸಮಿತಿ ಸಭೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಮೊದಲ ಡೋಸ್ ಪಡೆದು ಎರಡನೇ ಡೋಸ್ ಬಾಕಿಯಿರುವ ಹಿರಿಯ ನಾಗರೀಕರ ವಿವರಗಳನ್ನು ಪಡೆದು ಅವರಿಗೆ ಅವರ ವಾಸಸ್ಥಳದ ಸಮೀಪವೇ ಲಸಿಕೆಗೆ ವ್ಯವಸ್ಥೆ ಮಾಡಿ, ಖಾಸಗಿಯಾಗಿ ಈಗಾಗಲೇ ಲಸಿಕೆ ಪಡೆದಿರುವ ಹಿರಿಯ ನಾಗರೀಕರ ವಿವರಗಳನ್ನೂ ಸಹ ಪಡೆದು ಅವರಿಗೂ ಲಸಿಕೆಗೆ ವ್ಯವಸ್ಥೆ ಮಾಡಿ. ಗ್ರಾಮಾಂತರ ಪ್ರದೇಶದಲ್ಲಿ ಸಹ ಅಲ್ಲಿಯೇ ಕ್ಯಾಂಪ್ ಏರ್ಪಡಿಸಿ ಲಸಿಕೆ ನೀಡಲು ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿರುವ ಎಲ್ಲಾ ಹಿರಿಯ ನಾಗರೀಕರಿಗೆ ಎರಡೂ ಡೋಸ್ ಲಸಿಕೆ ನೀಡುವುದರ ಮೂಲಕ ಅವರು ಕೋವಿಡ್ ಗೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲು 413861 ಗುರಿ ಹೊಂದಿದ್ದು, ಇದುವರೆಗೆ 332255 ಮಂದಿಗೆ ಪ್ರಥಮ ಡೋಸ್ ನೀಡಿ, 80% ಸಾಧನೆ ಆಗಿದೆ. 169499 ಮಂದಿಗೆ ಎರಡನೇ ಡೋಸ್ ನೀಡಿ 41% ಸಾಧನೆ ಮಾಡಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಗುರಿ ಸಾಧಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಹಿರಿಯ ನಾಗರೀಕರು 100% ಸಂಪೂರ್ಣ ಎರಡೂ ಡೋಸ್ ಲಸಿಕೆ ಪಡೆಯುವಂತೆ ಕಾರ್ಯಕ್ರಮ ರೂಪಿಸಿ ಎಂದರು.
ಎಲ್ಲಾ ಖಾಸಗಿ ಅಸ್ಪತ್ರೆಗಳಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪರೀಕ್ಷೆಯನ್ನು ಹೆಚ್ಚುಗೊಳಿಸಲಾಗಿದ್ದು, ಸ್ವಾಬ್ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಲು ಕ್ರಮ ಕೈಗೊಳ್ಳಿ, ಲ್ಯಾಬ್ ನಲ್ಲಿ ಪರೀಕ್ಷಾ ವರದಿ ನೀಡಲು ವಿಳಂಬವಾದಲ್ಲಿ, ಪಕ್ಕದ ಜಿಲ್ಲೆಗಳಿಗೆ ಸ್ವಾಬ್ ಕಳುಹಿಸಿ, ನಿಗದಿತ ಅವಧಿಯೊಳಗೆ ವರದಿ ಪಡೆಯುವಂತೆ ಹೇಳಿದರು.
ಜಿಲ್ಲೆಯಲ್ಲಿ ಆಕ್ಸಿಜಿನ್ ಪ್ಲಾಂಟ್ ನಿರ್ಮಾಣ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಅಧಷ್ಟು ಶೀಘ್ರದಲ್ಲಿ ಜಿಲ್ಲೆಗೆ ಮಂಜೂರಾಗಿರುವ ಎಲ್ಲಾ ಪ್ಲಾಂಟ್ ಗಳ ಕಾಮಗಾರಿಗಳು ಮುಕ್ತಾಯಗೊಂಡು, ಕಾರ್ಯನಿರ್ವಹಿಸುವ ಕುರಿತಂತೆ ಸಂಬಂಧಪಟ್ಟ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ತಿಳಿಸಿದರು.
ಮಕ್ಕಳ ವಾರ್ಡ್ಗಳ ನಿರ್ಮಾಣ ಕುರಿತಂತೆ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿ, ಸರ್ಕಾರ ಮತ್ತು ವಿವಿಧ ದಾನಿಗಳು ನೀಡಿರುವ ವೈದ್ಯಕೀಯ ಉಪಕರಣಗಳನ್ನು ವಾರ್ಡ್ಗಳಲ್ಲಿ ಅಳವಡಿಸಿ, ನಗರ ಪ್ರದೇಶದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯು ವಾಸಿಸುವ 100 ಮೀ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದ 200 ಮೀ ವ್ಯಾಪ್ತಿಯಲ್ಲಿ ವ್ಯಾಪಕ ಟೆಸ್ಟಿಂಗ್ ಗಳನ್ನು ನಡೆಸಿ, ಉದ್ಯೋಗಿಗಳು ಪಾಸಿಟಿವ್ ಬಂದಲ್ಲಿ ಅವರೊಂದಿಗೆ ಕಾರ್ಯ ನಿರ್ವಹಿಸುವ ಎಲ್ಲಾ ಸಹದ್ಯೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದರು.
ಜಿಲ್ಲೆಗೆ ಕೇರಳ ಸಮೀಪದ್ದಲ್ಲಿದ್ದು, ಅಲ್ಲಿಂದ ವಿವಿಧ ಕಾರಣಗಳಿಗೆ ಸಾರ್ವಜನಿಕರು ಆಗಮಿಸುತ್ತಿರುವ ಕಾರಣ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ, ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ಹೊರರಾಜ್ಯದ ವಿದ್ಯಾರ್ಥಿಗಳನ್ನು 7 ದಿನಗಳ ಐಸೊಲೇಶನ್ ಗೆ ಒಳಪಡಿಸಿ, 7 ನೇ ದಿನ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿ ಎಂದು ಡಿಸಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ಎಕ್ಸ್ಪರ್ಟ್ ಸಮಿತಿಯ ವಿವಿಧ ವೈದ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.