ಅಹ್ಮದಾಬಾದ್: ಈ ಬಾರಿಯ ಐಪಿಎಲ್ ನಲ್ಲಿ ನೂತನ ತಂಡವಾಗಿ ಪಾದಾರ್ಪಣೆ ಮಾಡಿ ಆರಂಭದಿಂದ ಗೆಲುವಿನ ಲಯ ಕಂಡುಕೊಂಡ ಗುಜರಾತ್ ಟೈಟನ್ಸ್ ಇಂದು ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 7 ವಿಕೆಟ್ ಗಳ ಗೆಲುವನ್ನು ಸಾಧಿಸಿ ಟಾಟಾ ಐಪಿಎಲ್ 2022 ಚ್ಯಾಂಪಿಯನ್ ತಂಡವಾಗಿ ಮೂಡಿಬಂದಿದೆ.
ಗುಜರಾತ್ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಸಂಜು ಸ್ಯಾಮ್ಸನ್ ಪಡೆ ಮೊದಲು ಬ್ಯಾಟಿಂಗ್ ನಡೆಸಿ, ಹಾರ್ದಿಕ್ ಪಾಂಡ್ಯ ಪಡೆಯ ಶಿಸ್ತುಬದ್ಧ ಬೌಲಿಂಗ್ ಎದುರಿಸಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 130 ರನ್ ಗಳಿಸಿತು.
ಕಳೆದ ಪಂದ್ಯದಲ್ಲಿ ಗುಡುಗಿದ ಬಟ್ಲರ್ ಇಂದು 39 ರನ್ ಗಳಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 17 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು.
ಸುಲಭದ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಪ್ರಸಿದ್ ಕೃಷ್ಣ ಆರಂಭಿಕ ಆಘಾತ ನೀಡಿದರು. 23 ರನ್ ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡ ಗುಜರಾತ್ ತಂಡವನ್ನು ಕೆಲ ಕಾಲ ಕಟ್ಟಿ ಹಾಕುವಲ್ಲಿ ರಾಜಸ್ಥಾನ ತಂಡ ಯಶಸ್ಸು ಕಂಡಿತು.
ಪಾಂಡ್ಯ-ಗಿಲ್ ಜೋಡಿ ಮೂರನೇ ವಿಕೆಟಿಗೆ 50 ರನ್ ಜೊತೆಯಾಟ ನೀಡಿ ಪಂದ್ಯದ ಗತಿಯನ್ನೇ ತಿರುಗಿಸಿದರು. 13.2 ಓವರ್ ಆಗುವಷ್ಟರಲ್ಲಿ ಪಾಂಡ್ಯ 34 ರನ್ ಗಳಿಸಿ ಔಟ್ ಆದರೂ, ಬಳಿಕ ಕ್ರೀಸ್ ಗೆ ಆಗಮಿಸಿದ ಹೊಡೆಬಡಿಯ ದಾಂಡಿಗ ಮಿಲ್ಲರ್ ಕೇವಲ 19 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ 11 ಎಸೆತಗಳು ಬಾಕಿ ಇರುವಾಗಲೇ ಗುಜರಾತ್ ತಂಡಕ್ಕೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಗಿಲ್ ಅಜೇಯ 45 ರನ್ ಗಳಿಸಿ ತಂಡವನ್ನು ಆಧರಿಸಿದರು.
ಸ್ಕೋರ್ ವಿವರ:
ರಾಜಸ್ಥಾನ ರಾಯಲ್ಸ್- 130/9 (20 ಓವರ್)
ಗುಜರಾತ್ ಟೈಟನ್ಸ್- 133/3 (18.1 ಓವರ್)