ಬೊಲ್ಯಾಂಡ್ ಪಾರ್ಕ್: ಇಂದು ನಡೆದ ಎರಡನೆಯ ಏಕದಿನ ಪಂದ್ಯದಲ್ಲೂ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿದೆ. ತನ್ಮೂಲಕ ದಕ್ಷಿಣ ಆಫ್ರಿಕಾ ಸರಣಿ ಗೆಲುವಿನ ಸವಿಯೊಂದಿಗೆ ಕ್ಲೀನ್ ಸ್ವೀಪ್ ಎದುರು ನೋಡುತ್ತಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ನಾಯಕ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದರು. ರಾಹುಲ್ ಅರ್ಧಶತಕ (55) ಗಳಿಸಿದರು. ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರು.
ರಿಷಬ್ ಪಂತ್ ಹೊಡೆಬಡಿಯ ಆಟಕ್ಕೆ ಹೆಚ್ಚು ಒತ್ತು ನೀಡಿ 85 ರನ್ ಗಳಿಸಿ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಶಾರ್ದುಲ್ ಠಾಕೂರ್ (ಅಜೇಯ 40) ಅಶ್ವಿನ್ (ಅಜೇಯ 25) ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ಆಫ್ರಿಕಾಗೆ ಕಠಿಣ ಸವಾಲನ್ನು ನೀಡಿತು.
ಕಳಪೆ ಬೌಲಿಂಗ್ ನೊಂದಿಗೆ ಆಟ ಆರಂಭಿಸಿದ ಭಾರತದ ವೇಗಿಗಳನ್ನು ಟೆಂಬ ಬವುಮಾ ಪಡೆ ಮನಸೋ ಇಚ್ಛೆ ದಂಡಿಸಿ ಉತ್ತಮ ರನ್ ರೇಟ್ ಕಾಯ್ದುಕೊಂಡು ಭಾರತದ ನೀಡಿದ ಸವಾಲನ್ನು ನಿರಾಯಾಸವಾಗಿ ಎದುರಿಸಿ 11 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.
ಆರಂಭಿಕ ಮಾಲನ್-ಡಿ ಕಾಕ್ ಜೋಡಿ ಮೊದಲ ವಿಕೆಟಿಗೆ 132 ರನ್ ಕಲೆ ಹಾಕಿದರು. ಶತಕ ವಂಚಿತ ಮಾಲನ್ 91 ರನ್ ಗಳಿಸಿದರೆ, ಡಿಕಾಕ್ 78 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಶತಕದೊಂದಿಗೆ ಅಬ್ಬರಿಸಿದ ರಸ್ಸಿ ವಾನ್ ಡರ್ ಡುಸೆನ್ ಅಜೇಯ 37 ರನ್ ಗಳಿಸಿದರು.