ಅಹ್ಮದಾಬಾದ್, ಅ.5: (ಉಡುಪಿ ಬುಲೆಟಿನ್ ವರದಿ) ಗುರುವಾರ ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಚ್ಯಾಂಪಿಯನ್ಶಿಪ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ಇಂಗ್ಲೆಂಡಿನ ಆರಂಭಿಕ ಜೋಡಿಯನ್ನು ಬೇಗನೆ ಬೇರ್ಪಡಿಸಿತು. ಸ್ಪೋಟಕ ಆಟಗಾರ ಡೇವಿಡ್ ಮಲಾನ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಬೇರ್ಸ್ಟೋ 33 ರನ್ ಗಳಿಸಿ ಔಟಾದರು. ಜೊ ರೂಟ್ ತನ್ನ ಎಂದಿನ ಶೈಲಿಯ ಆಟದೊಂದಿಗೆ 77 ರನ್ ಗಳಿಸಿದರು. ಬಟ್ಲರ್ 43 ರನ್ ಗಳಿಸಿದರು. 50 ಓವರ್ ಗಳಲ್ಲಿ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತು.
ನ್ಯೂಜಿಲೆಂಡ್ ಆರಂಭಿಕ ಆಟಗಾರ ವಿಲ್ ಯಂಗ್ ನನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿಸುವಲ್ಲಿ ಇಂಗ್ಲೆಂಡ್ ಯಶಸ್ಸು ಕಂಡಿತು. ಆದರೆ, ನಂತ ಜತೆಗೂಡಿದ ರಚಿನ್ ರವೀಂದ್ರ ಡೆವಾನ್ ಕಾನ್ವೇ ಜತೆಗೂಡಿ ಸ್ಪೋಟಕ ಮತ್ತು ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಈ ಜೋಡಿ ಅಜೇಯ 273 ರನ್ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಕಾನ್ವೇ 121 ಎಸೆತಗಳಲ್ಲಿ ಅಜೇಯ 152 ರನ್ (19 ಫೋರ್ ಮತ್ತು 3 ಸಿಕ್ಸ್ ) ಗಳಿಸಿದರೆ, ರಚಿನ್ ರವೀಂದ್ರ 96 ಎಸೆತಗಳಲ್ಲಿ ಅಜೇಯ 123 ರನ್ (11 ಫೋರ್ ಮತ್ತು 5 ಸಿಕ್ಸ್) ಗಳಿಸಿದರು.
ನ್ಯೂಜಿಲೆಂಡ್ ಕೇವಲ 36.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳಿಸುವ ಮೂಲಕ ವಿಶ್ವಕಪ್ ಅಂಕಪಟ್ಟಿಯಲ್ಲಿ +2.149 ಎನ್.ಆರ್.ಆರ್. ನೊಂದಿಗೆ 2 ಅಂಕಗಳನ್ನು ಗಳಿಸಿ ಮೊದಲನೆಯ ಸ್ಥಾನವನ್ನು ಅಲಂಕರಿಸಿದೆ. ಒಂದು ವಿಕೆಟ್ ಮತ್ತು ಶತಕ ಗಳಿಸಿದ ರಚಿನ್ ರವೀಂದ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮುಂದಿನ ಪಂದ್ಯ: ಅಕ್ಟೋಬರ್ 6- ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್. ಸ್ಥಳ: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂ ಹೈದರಾಬಾದ್. ಸಮಯ: ಮಧ್ಯಾಹ್ನ 2 ಗಂಟೆ