Home ಅಂಕಣ ನಾ ಕಂಡಂತೆ ನಗರ ಕೋಟೆ

ನಾ ಕಂಡಂತೆ ನಗರ ಕೋಟೆ

477
0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪ್ರದೇಶವು ಪ್ರಾಗೈತಿಹಾಸಿಕ ಕಾಲದಿಂದ ಐತಿಹಾಸಿಕ ಕಾಲಘಟ್ಟದವರೆಗಿನ ಪ್ರಾಚ್ಯವಶೇಷಗಳನ್ನು ಹೊಂದಿದ್ದು, ತನ್ನದೇ ಆದ ಸ್ಥಳ ಪ್ರಾಮುಖ್ಯತೆಯನ್ನು‌ ಹೊಂದಿದೆ. ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿರುವ ನಗರ ಕೋಟೆ‌ಯು ಕೆಳದಿ‌ ಅರಸರ ಕಾಲಾವಧಿಯಲ್ಲಿ‌ ನಿರ್ಮಾಣವಾಗಿದ್ದು, ಇದನ್ನು ಬಿದನೂರು ಕೋಟೆ ಅಥವಾ ಶಿವಪ್ಪನಾಯಕನ ಕೋಟೆ ಎಂದೂ ಕರೆಯುತ್ತಾರೆ.

ನಗರ ಕೋಟೆ ಕೆಳದಿ‌ ರಾಜವಂಶದ ವೀರಭದ್ರ ನಾಯಕ ಕೆಳದಿಯ ಮೂಲ ರಾಜಧಾನಿ ಇಕ್ಕೇರಿಯನ್ನು ಬಿಜಾಪುರ‌ ಸುಲ್ತಾನರಿಂದ ಯುದ್ಧದಲ್ಲಿ ಕಳೆದುಕೊಂಡಾಗ 16 ನೆಯ ಶತಮಾನದಲ್ಲಿ‌ ಈ ಕೋಟೆಯನ್ನು ನಿರ್ಮಿಸಿದನು ಮತ್ತು ವೀರಭದ್ರ ನಾಯಕನ‌ ನಂತರ ಶಿವಪ್ಪನಾಯಕನು ಈ ಕೋಟೆಯನ್ನು‌ ಅಭಿವೃದ್ಧಿ ಪಡಿಸಿದನು‌ ಎಂಬುವುದು ಐತಿಹಾಸಿಕ ಆಕರದಿಂದ ತಿಳಿಯುತ್ತದೆ.

ಕ್ರಮೇಣ‌ ಈ ಕೋಟೆಯು ಹೈದರಾಲಿಯ ವಶವಾಗಿ ಮುಂದೆ ಹೈದರ್ ನಗರ ಎಂಬ ಹೆಸರಿನಿಂದಲೂ ಕರೆಯಲ್ಪಟ್ಟಿತು. ನಂತರ ಮೈಸೂರು ಯುದ್ಧ ಸಮಯದಲ್ಲಿ ಬೆಂಕಿಯಿಂದ ಕೋಟೆಯ ಹೆಚ್ಚಿನ‌ ಭಾಗಗಳು ಹಾನಿಗೊಳಗಾಯಿತು. ಈ ಕೋಟೆಯಲ್ಲಿ‌ ಮುಖ್ಯವಾಗಿ ಅರಮನೆಯ ಅವಶೇಷಗಳು, ಶಿವಪ್ಪನಾಯಕನ ದರ್ಬಾರ್ ಅಡಿಪಾಯ, ಕಾವಲು ಕೊಠಡಿಗಳು, ಬಾವಿಗಳು, ವೀಕ್ಷಣಾ ಗೋಪುರ, ಪಿರಂಗಿ ಹಾಗೂ ಇನ್ನೂ‌ ಮುಂತಾದ ಪ್ರಾಚ್ಯ ಅವಶೇಷಗಳನ್ನು ಇಂದಿಗೂ ಕಾಣಬಹುದಾಗಿದೆ.

ದೇವಗಂಗೆ‌ ಕೊಳ: ಪ್ರಾಚೀನ‌ ಕಾಲದಲ್ಲಿ ಬಿದನೂರಿನ‌ ರಾಜಮನೆತನದವರು ಸ್ನಾನಕ್ಕೆ ಇಲ್ಲಿನ ಕೊಳಗಳನ್ನು ಬಳಸುತ್ತಿದ್ದು‌ ಇಲ್ಲಿ ವಿವಿಧ ಆಕಾರ ಮತ್ತು ಗಾತ್ರದ 7 ಕೊಳಗಳಿದ್ದು ಇವುಗಳಿಗೆ ಸುತ್ತಮುತ್ತಲಿನ ಬೆಟ್ಟದ‌ ತಪ್ಪಲಿನಿಂದ ಬಂದ ನೀರು ಸಂಗ್ರಹವಾಗುತ್ತಿತ್ತು.

ಘಳಿಗೆ ಬಟ್ಟಲು: ಚೌಕಾಕಾರದ ರಚನೆಯನ್ನು‌ ಹೊಂದಿರುವ ಘಳಿಗೆ‌ ಬಟ್ಟಲನ್ನು ಕೆಳದಿ ರಾಣಿ ವೀರ ಚೆನ್ನಮ್ಮಾಜಿಯು ನಿರ್ಮಾಣ ಮಾಡಿದ್ದು, ಶಿವಪ್ಪನಾಯಕನ ಕಾಲಾವಧಿಯಲ್ಲಿ ಸಮಯ, ಕಾಲ ಮತ್ತು ಮದುವೆಯ ಮುಹೂರ್ತವನ್ನು‌ ನಿರ್ಧರಿಸಲು ಬಳಸುತ್ತಿದ್ದರು ಎಂಬ ಪ್ರತೀತಿ‌ ಇದೆ.‌ ಒಟ್ಟಿನಲ್ಲಿ‌‌ ನಗರ‌ವು ತನ್ನ ಪ್ರಾಚೀನತೆ‌ಯ ಬೆರಗನ್ನು ಉಳಿಸಿಕೊಂಡು, ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಂಡಿರುವುದರಲ್ಲಿ ಇನ್ನೊಂದು ಮಾತಿಲ್ಲ.

-ಅಪ್ಸಾನಾ ಬಿ.ಎನ್
ಅಂತಿಮ ಬಿ.ಎ. ವಿದ್ಯಾರ್ಥಿನಿ, ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.