ಏಳನೇ ಶ್ರೇಯಾಂಕದ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿಯನ್ನು ಸೋಲಿಸಿ ವಿಶ್ವದ ಅಗ್ರ ಶ್ರೇಯಾಂಕ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತನ್ನ ಆರನೇ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮೂರು ಗಂಟೆ 24 ನಿಮಿಷಗಳ ಕಾಲ ನಡೆದ ಉಭಯ ಆಟಗಾರರ ಬಿರುಸಿನ ಆಟದಲ್ಲಿ 34 ವರ್ಷದ ಸರ್ಬಿಯಾ ದೇಶದ ಜೊಕೊವಿಕ್ 6-7, 6-4, 6-4, 6-3ರಿಂದ ಗೆಲ್ಲುವ ಮೂಲಕ ವಿಂಬಲ್ಡನ್ ಪುರುಷರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇದು ಅವರ 20ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಪಟ್ಟಿಯಲ್ಲಿ ಜೊಕೊವಿಕ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಗೆದ್ದಿರುವ ಅಗ್ರ ಶ್ರೇಯಾಂಕಿತ ಜೊಕೊವಿಕ್ ಅವರು ಒಲಿಂಪಿಕ್ ಚಿನ್ನದ ಪದಕ ಮತ್ತು ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದರೆ, ಗೋಲ್ಡನ್ ಸ್ಲ್ಯಾಮ್ ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.