Sunday, November 24, 2024
Sunday, November 24, 2024

ಕೊಹ್ಲಿಯ ‘ವಿರಾಟ್ ರೂಪ’ ಕಂಡು ಬೆದರಿದ ಪಾಕ್

ಕೊಹ್ಲಿಯ ‘ವಿರಾಟ್ ರೂಪ’ ಕಂಡು ಬೆದರಿದ ಪಾಕ್

Date:

ಮೆಲ್ಬರ್ನ್: (ಉಡುಪಿ ಬುಲೆಟಿನ್ ವಿಶೇಷ ವರದಿ) ಕ್ಷಣ ಕ್ಷಣವೂ ಕುತೂಹಲ.. ಇನ್ನೇನಾಗುತ್ತದೆ ಎಂದು ಎರಡೂ ಕಡೆಯವರು ಉಗುರು ಕಚ್ಚಿ ನೋಡುತ್ತಿದ್ದರು. ಶೇ. 78 ರಷ್ಟು ಪಾಕಿಸ್ತಾನ ಗೆಲ್ಲುತ್ತದೆ ಎಂದು ಅಂಕಿಸಂಖ್ಯೆ ತೋರಿಸುತ್ತಿದ್ದರೂ, ವಿರಾಟ್ ಕೊಹ್ಲಿಯ ‘ವಿರಾಟ ಸ್ವರೂಪ’ದ ಎದುರು ಲೆಕ್ಕಾಚಾರವೆಲ್ಲವೂ ಬುಡಮೇಲಾಗಿ ವಿಜಯದ ಮಾಲೆ ಭಾರತದ ಕಡೆಗೆ ಒಲಿದು ಬಂತು. ಭಾರತಕ್ಕೆ ನಾಲ್ಕು ವಿಕೆಟ್ ಗಳ ರೋಚಕ ಗೆಲುವು. ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಅತ್ಯದ್ಭುತ ಕ್ಲೈಮಾಕ್ಸ್ ನಿಂದ ಕೂಡಿದ ಪಂದ್ಯ ಬೇರೊಂದಿಲ್ಲ ಎಂದು ಹೇಳಿದರೆ ಅತಿಶಯವಾಗದು.

ಜಾಹೀರಾತು

ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಇಂದು ನಡೆದ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಭಾರತ- ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ಅರ್ಶದೀಪ್ ಸಿಂಗ್ ಮರ್ಮಾಘಾತ ನೀಡಿದರು.

ಮೊದಲ ಎಸೆತದಲ್ಲೇ ನಾಯಕ ಬಾಬರ್ ಆಜಮ್ ಪೆವಿಲಿಯನ್ ಸೇರಿಕೊಂಡರು. ಕೆಲವೇ ನಿಮಿಷಗಳ ನಂತರ ಮಹಮ್ಮದ್ ರಿಜ್ವಾನ್ ಕೂಡ ಅರ್ಶದೀಪ್ ಸಿಂಗ್ ಗೆ ಬಲಿಯಾದರು. ತನ್ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಆರಂಭಿಕ ಜೋಡಿಯನ್ನು ಬೇರ್ಪಡಿಸುವಲ್ಲಿ ಅರ್ಶದೀಪ್ ಯಶಸ್ಸು ಪಡೆದರು.

ಬಳಿಕ ಜತೆಗೂಡಿದ ಶಾನ್ ಮಸೂದ್ ಮತ್ತು ಇಫ್ತಿಕಾರ್ ಅಹ್ಮದ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮಸೂದ್ ಅಜೇಯ 52 ರನ್ ಗಳಿಸಿದರೆ, ಇಫ್ತಿಕಾರ್ 51 ರನ್ ಗಳಿಸಿದರು. ಉಳಿದಂತೆ ಪಾಕ್ ಆಟಗಾರರನ್ನು ಒಂದಂಕಿಗೆ ಕಟ್ಟಿ ಹಾಕುವಲ್ಲಿ ಭಾರತೀಯ ಬೌಲರ್ ಗಳು ಯಶಸ್ವಿಯಾದರು.

ಕೊನೆಯ ಅವಧಿಯಲ್ಲಿ ಬ್ಯಾಟ್ ಬೀಸಿದ ವೇಗಿ ಶಹೀನ್ ಆಫ್ರಿದಿ ಕೇವಲ 8 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಮೂಲಕ 16 ರನ್ ಗಳಿಸಿದರು. ಅಂತಿಮವಾಗಿ 20 ಓವರುಗಳಲ್ಲಿ ಪಾಕಿಸ್ತಾನ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಅರ್ಶದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಗಳಿಸಿದರು.

ಗೆಲ್ಲಲು 160 ರನ್ ಬೆನ್ನಟ್ಟಿದ ಭಾರತ, ಕುಂಟುತ್ತಾ ಸಾಗುತ್ತಿದ್ದಂತೆ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ತಪ್ಪು ಹೊಡೆತಗಳಿಗೆ ಕೈ ಹಾಕಿ ಔಟಾದರು. ವಿರಾಟ್ ಕೊಹ್ಲಿಗೆ ಸಾಥ್ ನೀಡಲು ಸೂರ್ಯಕುಮಾರ್ ಯಾದವ್ ಆಗಮಿಸಿದಾಗ ಭಾರತೀಯರಿಗೆ ಗೆಲುವಿನ ಆಸೆ ಚಿಗುರಿತು. ಆರಂಭದಲ್ಲೇ ಸ್ಪೋಟಕ ಆಟದ ಮುನ್ಸೂಚನೆ ನೀಡಿದ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 15 ರನ್ ಗಳಿಸಿ ರೌಫ್ ಗೆ ವಿಕೆಟ್ ಒಪ್ಪಿಸಿದರು. ನಂತರ ಆಗಮಿಸಿದ ಅಕ್ಸರ್ ಪಟೇಲ್ ರನೌಟ್ ಗೆ ಬಲಿಯಾದಾಗ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು.

ಶತಕದ ಜೊತೆಯಾಟ: ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಹಳ ಎಚ್ಚರಿಕೆಯಿಂದ ಆಟವಾಡಿ ಶತಕದ ಜೊತೆಯಾಟ ನೀಡಿದರು. ಪಾಂಡ್ಯ 40 ರನ್ ಗಳಿಸಿದರೆ, ಕೊಹ್ಲಿ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಕೇವಲ 53 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 6 ಬೌಂಡರಿ ಮೂಲಕ ಅಜೇಯ 82 ಗಳಿಸಿ ಭಾರತದ ರೋಚಕ ಗೆಲುವಿನ ಶಿಲ್ಪಿಯಾದರು.

ಗೆಲುವನ್ನು ಸಂಭ್ರಮಿಸುತ್ತಿರುವ ವಿರಾಟ್ ಕೊಹ್ಲಿ

ಕೊನೆಯ ಮೂರು ಓವರ್ ಗಳಲ್ಲಿ ೪೮ ರನ್: ಕೊನೆಯ ಮೂರು ಓವರ್ ಗಳು ನಿರ್ಣಾಯಕವಾಗಿತ್ತು. ವೇಗಿ ಶಹೀನ್ ಆಫ್ರಿದಿ ಎಸೆದ 18ನೇ ಓವರಿನ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಕೊಹ್ಲಿಯನ್ನು ನೋಡಿ ಬೆದರಿದ ಆಫ್ರಿದಿಯ ಎರಡನೆಯ ಎಸೆತ ವೈಡ್ ಆಗಿತ್ತು. ಮೂರನೇ ಎಸೆತದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಕೊಹ್ಲಿ ಬೌಂಡರಿ ಹೊಡೆದರು. ಕೊನೆಯ ಎಸೆತವನ್ನು ಮತ್ತೊಮ್ಮೆ ಬೌಂಡರಿಗಟ್ಟುವ ಮೂಲಕ ಕೊಹ್ಲಿ ಆಫ್ರಿದಿಯ ಬೆವರಿಳಿಸಿದರು.

19ನೇ ಓವರಿನ ಕೊನೆಯ ಎಸೆತಗಳನ್ನು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಹೊಡೆಯುವ ಮೂಲಕ ವಿರಾಟ್ ಕೊಹ್ಲಿ ಕೊನೆಯ ಓವರಿನಲ್ಲೂ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು.

ಕೊನೆಯ ಓವರ್ ನಲ್ಲಿ ಗೆಲ್ಲಲು 16 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಪಾಂಡ್ಯ ಔಟ್. ಕತೆ ಮುಗಿಯಿತು ಎಂದು ಭಾರತದ ಅಭಿಮಾನಿಗಳು ತಲೆ ಮೇಲೆ ಕೈ ಇಟ್ಟು ಕೂತರು. ಎರಡನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ಒಂದು ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಕೊಹ್ಲಿ ಚಿರತೆಯ ಓಟದ ಮೂಲಕ ಎರಡು ರನ್ ಗಳಿಸಿದರು.

ಮೂರು ಎಸೆತಗಳ ಕ್ಲೈಮಾಕ್ಸ್: ಕೊನೆಯ ಮೂರು ಎಸೆತಗಳಲ್ಲಿ ಗೆಲ್ಲಲು 13 ರನ್ ಅವಶ್ಯಕವಾಗಿತ್ತು. ಒತ್ತಡದ ನಡುವೆಯೂ ಕೊಹ್ಲಿ ಫುಲ್ ಟಾಸ್ ಎಸೆತವನ್ನು ಗಗನಚುಂಬಿ ಹೊಡೆತದ ಮೂಲಕ ಸಿಕ್ಸರ್ ಗೆ ಅಟ್ಟಿದ್ದರು. ಈ ಎಸೆತವು ನೋ ಬಾಲ್ ಆಗಿತ್ತು. ಫ್ರೀ ಹಿಟ್ ಎಸೆತ ವೈಡ್ ಆಗಿದ್ದರಿಂದ ಮುಂದಿನ ಎಸೆತವೂ ಫ್ರೀ ಹಿಟ್ ಆಗಿತ್ತು. ಈ ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆದರೂ ಫ್ರೀ ಹಿಟ್ ಆದ ಕಾರಣ ಅದು ಔಟ್ ಆಗಿರಲಿಲ್ಲ. ಚೆಂಡು ವಿಕೆಟಿಗೆ ಬಡಿದು ನೇರವಾಗಿ ಥರ್ಡ್ ಮ್ಯಾನ್ ಕಡೆಗೆ ಸಾಗಿದಾಗ ಕೊಹ್ಲಿ ವೇಗವಾಗಿ ಓಡಿ ಮೂರು ರನ್ ಗಳಿಸಿದರು.

ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿತ್ತು. ಐದನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಔಟ್ ಆದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿತ್ತು. ಕೊನೆಯ ಎಸೆತವೂ ವೈಡ್ ಆಗುವ ಮೂಲಕ ಭಾರತದ ಹೊಸ್ತಿಲಲ್ಲಿ ವಿಜಯದ ಮಾಲೆ ಬಂದಿತ್ತು. ಕೊನೆಯ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಒಂದು ರನ್ ಗಳಿಸಿ ಗೆಲುವಿನ ನಗೆಯೊಂದಿಗೆ ಗೆಲುವಿನ ಶಿಲ್ಪಿ ಕೊಹ್ಲಿಯ ಜತೆ ಕುಣಿದು ಸಂಭ್ರಮಿಸಿದರು.

ಗೆಲುವಿನ ಅಪ್ಪುಗೆ

ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!