ನವದೆಹಲಿ, ಫೆ.12: ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಪಂದ್ಯಾಕೂಟದ ಭಾರತ ಮತ್ತು ನಮೀಬಿಯಾ ಪಂದ್ಯದಲ್ಲಿ ಭಾರತ 93 ರನ್ನುಗಳ ಗೆಲುವು ಪಡೆಯುವ ಮೂಲಕ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಆರಂಭಿಕ ಇಶಾನ್ ಕಿಶನ್ ಸಂಜು ಸ್ಯಾಮ್ಸನ್ ಜೋಡಿ ಉತ್ತಮ ಜತೆಯಾಟದ ನಿರೀಕ್ಷೆ ಮೂಡಿಸಿದರು.
ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನಡೆಸಿ ಕೇವಲ 24 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ನೆರವಿನೊಂದಿಗೆ 61 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್ ಗಳಿಸಿದರು. 20 ಓವರ್ ಗಳಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.
ಬೃಹತ್ ಗುರಿ ಬೆನ್ನತ್ತಿದ್ದ ನಮೀಬಿಯಾ ತಂಡಕ್ಕೆ ವೇಗಿ ಅರ್ಷದೀಪ್ ಸಿಂಗ್ ಮೊದಲ ಆಘಾತ ನೀಡಿದರು. 18.2 ಓವರ್ ಗಳಲ್ಲಿ ನಮೀಬಿಯಾ 116 ರನ್ನುಗಳಿಗೆ ಸರ್ವಪತನವಾಯಿತು. ವರುಣ್ ಚಕ್ರವರ್ತಿ 2 ಓವರ್ ಗಳಲ್ಲಿ ಕೇವಲ 7 ರನ್ ನೀಡುವ ಮೂಲಕ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.




By
ForthFocus™