ದುಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ನಡೆದ ಐಪಿಎಲ್ ಫೈನಲ್ ರೋಚಕ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 27 ರನ್ನುಗಳ ಗೆಲುವನ್ನು ಸಾಧಿಸಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ಆರಂಭಿಕ ಆಟಗಾರ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ತದ ಭರವಸೆ ನೀಡಿದರು.
ಡುಪ್ಲೆಸಿಸ್ 59 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 3 ಬಾನೆತ್ತರದ ಸಿಕ್ಸರ್ ಮೂಲಕ 86 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 32, ಉತ್ತಪ್ಪ 31 ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಆಧರಿಸಿದರು.
ಡುಪ್ಲೆಸಿಸ್- ಮೊಯಿನ್ ಆಲಿ ಜೋಡಿ ಮೂರನೇ ವಿಕೆಟಿಗೆ 68 ರನ್ ಜೊತೆಯಾಟ ನೀಡಿ ಚೆನ್ನೈ ತಂಡವನ್ನು ಸುಭದ್ರ ಸ್ಥಿತಿಯಲ್ಲಿ ಇರಿಸಲು ನೆರವಾದರು. 20 ಓವರುಗಳಲ್ಲಿ ಚೆನ್ನೈ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.
ಬೃಹತ್ ಗುರಿಯನ್ನು ಬೆನ್ನಟ್ಟಿದ ಕೊಲ್ಕತಾಗೆ ಗಿಲ್-ಐಯ್ಯರ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟಿಗೆ 91 ರನ್ ಗಳ ಉತ್ತಮ ಜೊತೆಯಾಟ ನೀಡಿದ ಈ ಜೋಡಿ, ಕೊಲ್ಕತಾಗೆ ಗೆಲುವು ಶತಃಸಿದ್ಧ ಎಂಬ ಆಸೆ ಚಿಗುರಿಸಿತು.
10 ಓವರ್ ಆಗುವಷ್ಟರಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಕೊಲ್ಕತಾಗೆ ಶಾರ್ದುಲ್ ಠಾಕೂರ್ ಮೊದಲ ಆಘಾತ ನೀಡಿದರು. ಹೊಡೆಬಡಿಯ ಆಟವನ್ನು ಪ್ರದರ್ಶಿಸಿದ ಗಿಲ್ 51 ರನ್ ಗಳಿಸಿದರೆ, ಚೆನ್ನೈ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ವೆಂಕಟೇಶ್ ಐಯ್ಯರ್ 50 ರನ್ ಗಳಿಸಿದರು.
ಉಳಿದೆಲ್ಲಾ ಆಟಗಾರರು ಪೆವಿಲಿಯನ್ ಪಥಸಂಚಲನ ನಡೆಸಿದರು. 20 ಓವರುಗಳಲ್ಲಿ ಕೊಲ್ಕತಾ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಶಾರ್ದುಲ್ ಠಾಕೂರ್ 3 ವಿಕೆಟ್, ರವೀಂದ್ರ ಜಡೇಜಾ, ಹೇಜಲ್ವುಡ್ ತಲಾ 2 ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಡುಪ್ಲೆಸಿಸ್ ಪಾಲಾದರೆ, ಆರ್.ಸಿ.ಬಿ ವೇಗಿ ಹರ್ಷಲ್ ಪಟೇಲ್ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾದರು.