ಯು.ಬಿ.ಎನ್.ಡಿ., ಸೆ.13: ಯು.ಎ.ಇ ನ ಏಳು ಎಮಿರೇಟ್ಸ್ ವ್ಯಾಪ್ತಿಯ ಶೈಕ್ಷಣಿಕ ಕ್ಲಸ್ಟರ್ ವಿಭಾಗದ ಸಿ.ಬಿ.ಎಸ್.ಸಿ.ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಚೆಸ್ ಟೂರ್ನಮೆಂಟ್ ಅಬುದಾಭಿಯ ಇಂಡಿಯನ್ ಸ್ಕೂಲ್ ನಲ್ಲಿ ಉದ್ಘಾಟನೆಗೊಂಡಿತು. ಅಬುಧಾಬಿ ಇಂಡಿಯನ್ ಸ್ಕೂಲಿನ ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದ ಆಡಳಿತ ಸಂಯೋಜಕ ಪರೀಕ ಸರ್ವೋತ್ತಮ ಶೆಟ್ಟಿ ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಕ್ರೀಡೆ ಇದ್ದರೆ ಅದು ಚೆಸ್. ಈ ಆಟದಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಸೃಜನಶೀಲತೆ ಯೇೂಚನಾಶಕ್ತಿ ಬೆಳೆಯಲು ಸಹಕಾರಿಯಾಗುತ್ತದೆ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಬದುಕಿನ ಮುಂದಿನ ಸವಾಲುಗಳನ್ನು ಎದುರಿಸುವ ಕೌಶಲ್ಯತೆಯನ್ನು ಬೆಳೆಸುವುದರಲ್ಲಿ ಚೆಸ್ ಕ್ರೀಡೆ ಸಹಕಾರಿ ಅನ್ನುವುದರೊಂದಿಗೆ ವಿಶ್ವದ ಹಾಗೂ ಭಾರತದ ಚೆಸ್ ದಿಗ್ಗಜರ ಸಾಧನೆಯು ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲೆ ಡಾ. ಅಲ್ಫನಾ ಸ್ವಾನಿ ಅಧ್ಯಕ್ಷತೆ ವಹಿಸಿದ್ದರು .ವಿಶೇಷ ಅತಿಥಿಯಾಗಿ ಎಂ.ಜಿ.ಎಂ.ಕಾಲೇಜಿನ ರಾಜ್ಯಶಾಸ್ತ್ರ ನಿವೃತ್ತ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ೯ ಸುರೇಂದ್ರನಾಥ ಶೆಟ್ಟಿ, ಉಪ ಪ್ರಾಂಶುಪಾಲೆ ಲಿಟ್ಟಿ ಥಾಮಸ್, ಯು.ಎ.ಇ.ಚೆಸ್ ಫೆಡರೇಶನ್ ಮುಖ್ಯ ತರಬೇತುದಾರ ಎನ್. ಎಂ. ಸಿ. ಬೊಗಡಾನ್, ಪಂದ್ಯಗಳ ಮುಖ್ಯ ವೀಕ್ಷಕ ಅಜುರುದ್ದೀನ್, ಆಡಳಿತಾಧಿಕಾರಿ ಅನೀಶ್ ಚತುರ್ವೇದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯು ಎ.ಇ.ಏಳು ಎಮಿರೇಟ್ಸ್ ಶೈಕ್ಷಣಿಕ ಕ್ಲಸ್ಟರ್ ವಿಭಾಗಳಿಂದ 1150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ದಿನ ಬಾಲಕಿಯರ ವಿಭಾಗದಲ್ಲಿ 39 ಶಾಲಾ ವಿದ್ಯಾರ್ಥಿಗಳು ಎರಡನೇಯ ದಿನ ಬಾಲಕರ ವಿಭಾಗದಲ್ಲಿ 53 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯು.ಎ.ಇ.ನಿಂದ ಆಯ್ಕೆಗೊಂಡ ವಿದ್ಯಾರ್ಥಿಗಳು ಭಾರತದಲ್ಲಿ ನಡೆಯುವ ಮುಂದಿನ ಚೆಸ್ ಪಂದ್ಯಗಳಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ.