ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ವಿಶ್ವ ಬ್ಯಾಂಕ್ ನೆರವಿನ ಪ್ರಮಾಣವನ್ನು ಹೆಚ್ಚಿಸಿದೆ. 8 ಬಿಲಿಯನ್ ಡಾಲರ್ ನಿಂದ 20 ಬಿಲಿಯನ್ ಡಾಲರ್ ಗೆ ನೆರವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾದ ಲಸಿಕೆ ತಯಾರಕರಿಗೆ ಉತ್ಪಾದನೆಯನ್ನು ಹೆಚ್ಚಿಸಲು ಬ್ಯಾಂಕಿನ ಖಾಸಗಿ ಹಣಕಾಸು ವಿಭಾಗವು 600 ಮಿಲಿಯನ್ ಯೂರೋ ಪ್ಯಾಕೇಜ್ ಘೋಷಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.
ಲಸಿಕೆ ಉತ್ಪಾದನೆ, ಸರಬರಾಜನ್ನು ಹೆಚ್ಚಿಸಲು ಕೈಗೊಂಡಿರುವ ಕ್ರಮಗಳು ಜೀವ ಉಳಿಸುತ್ತವೆ. ಇದರ ಜೊತೆಗೆ ಈ ರಾಷ್ಟ್ರಗಳಿಗೆ ನೆರವಿನಿಂದ ಆರ್ಥಿಕ ವ್ಯವಸ್ಥೆಯಲ್ಲಿ ಚೇತರಿಕೆ ಕೊಂಡುಕೊಳ್ಳಲು ಪೂರಕ ವಾತಾವರಣ ಉಂಟಾಗುವುದು ಮತ್ತು ಅಲ್ಲಿಯ ಜನರಿಗೆ ಸೋಂಕಿನ ವಿರುದ್ಧ ಹೋರಾಡಲು ಇಂಧನ ಒದಗಿಸಿದಂತಾಗುತ್ತದೆ ಎಂದು ವಿಶ್ವಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಸುದ್ದಿಗಾರರಿಗೆ ತಿಳಿಸಿದರು.
ಲಸಿಕೆ ವಿತರಣೆ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲು 2022ರ ವೇಳೆಗೆ 20 ಬಿಲಿಯನ್ ಡಾಲರ್ ಮೀಸಲಿರಿಸಲಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. 51 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಬ್ಯಾಂಕ್ 4.4 ಬಿಲಿಯನ್ ಡಾಲರ್ ನೆರವು ನೀಡಿದೆ. ಇದರಲ್ಲಿ ಅರ್ಧದಷ್ಟು ಕಡಿಮೆ ಬಡ್ಡಿ ಸಾಲದ ರೂಪದಲ್ಲಿ ವಿತರಿಸಲಾಗಿದೆ.
ಲಸಿಕೆ ಕುರಿತು ಸವಾಲುಗಳು ಇನ್ನೂ ಉಳಿದಿವೆ ಎಂದು ವಿಶ್ವಬ್ಯಾಂಕ್ ವಿಭಾಗ ಮುಖ್ಯಸ್ಥ ಆಕ್ಸೆಲ್ ವ್ಯಾನ್ ಟ್ರಾಟ್ಸೆನ್ಬರ್ಗ್ ಹೇಳಿದ್ದಾರೆ. ಈ ಸವಾಲುಗಳನ್ನು ಎದುರಿಸಲು ಬ್ಯಾಂಕ್ ಎಲ್ಲಾ ರಂಗಗಳಲ್ಲಿಯೂ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.