Home ಓದುಗರ ಮನದಾಳ ಮತ ಕೇಳುವಾಗ ಮೋದಿ ಹೆಸರು, ಮಂತ್ರಿ ಸ್ಥಾನ ನೀಡುವಾಗ ಜಾತಿಗೆ ಡೊಗ್ಗು ಸಲಾಮು!

ಮತ ಕೇಳುವಾಗ ಮೋದಿ ಹೆಸರು, ಮಂತ್ರಿ ಸ್ಥಾನ ನೀಡುವಾಗ ಜಾತಿಗೆ ಡೊಗ್ಗು ಸಲಾಮು!

1500
0

ಬಿಜೆಪಿ ಸರಕಾರದ ರಚನೆಯ ಸೂತ್ರ ಹೇಗಿದೆ ಅಂದ್ರೆ ಜಾತಿವಾದ ಮತ್ತು ಹಿಂದುತ್ವವಾದ ಎರಡನ್ನೂ ಸಮೀಕರಿಸಿಕೊಂಡು ಸರಕಾರ ರಚನೆಗೆ ಮುಂದಾಗಿದೆ ಅನ್ನುವುದು ಅಷ್ಟೇ ಸ್ವಷ್ಟ. ಹಿಂದುಳಿದ ವರ್ಗ ಪಟ್ಟಿಯಲ್ಲಿಯೇ ಬರುವ ಲಿಂಗಾಯತ 8 ಮಂದಿಗೆ ಮಂತ್ರಿ ಪದವಿ; ಒಕ್ಕಲಿಗ 7 ಮಂದಿಗೆ ಮಂತ್ರಿ ಪದವಿ; ಈ 15 ಮಂದಿಗೆ ಅಪ್ಪಟ ಜಾತಿ ಹಿನ್ನೆಲೆಯಲ್ಲಿಯೇ ಸಚಿವ ಪಟ್ಟ ದಕ್ಕಿದೆ ಅನ್ನುವುದು ಅಷ್ಟೇ ಸತ್ಯ. ಇದೇ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಮಿಕ್ಕಿ ಉಳಿದ ಸುಮಾರು 20ಕ್ಕೂ ಹೆಚ್ಚು ಜಾತಿಗಳಿಗೆ ಮಂತ್ರಿ ಸ್ಥಾನ ನೀಡುವಾಗ ಅಪ್ಪಟ ಹಿಂದುತ್ವ ಹಿಂಬಾಲಕರಿಗೆ ಮಣೆ ಹಾಕಿದೆ.

ಅಂತೂ, ಜಾತಿ ಬಲವಿಲ್ಲದ ಹಿಂದುತ್ವ ಪ್ರಭಾವಳಿ ಇಲ್ಲದ ಶಾಸಕರಿಗೆ ಆರಲ್ಲ ಹತ್ತು ಬಾರಿ ಶಾಸಕರಾದರೂ ಅದು ಲೆಕ್ಕಕ್ಕಿಲ್ಲ ಎಂಬಂತಿದೆ. ಒಂದಂತೂ ನಿಜ, ಮೋದಿಯನ್ನು ನಂಬಿಕೊಂಡು ಬಿಜೆಪಿಗೆ ಮತ ಹಾಕಿದವರಿಗೆ ಭ್ರಮನಿರಸನದ ಕಾಲ ಹತ್ತಿರವಾದಂತಿದೆ. ಮತ ಕೇಳುವಾಗ ಮೋದಿ ಹೆಸರು, ಮಂತ್ರಿ ಸ್ಥಾನ ನೀಡುವಾಗ ಜಾತಿಗೆ ಡೊಗ್ಗು ಸಲಾಮು..! ಬಿಜೆಪಿಯಲ್ಲಿ ಅಧಿಕಾರ ಪಡೆಯಬೇಕಾದರೆ ಅಗತ್ಯವಾಗಿರಬೇಕಾದ ಪ್ರಮುಖವಾದ ಅರ್ಹತೆ ಅಂದರೆ ಶಾಸಕರಾಗಿ ಆಗಾಗ್ಗೆ ಸರ್ಕಾರ ಬೀಳಿಸುವ ವಲಸಿಗರಾಗಿರಬೇಕು ಹೊರತು ಎಂದಿಗೂ ಮೂಲ ನಿವಾಸಿಗಳಾಗಲೇಬಾರದು!

ಕರಾವಳಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದಲ್ಲಿ ಗುರುತಿಸಿಕೊಂಡಿರುವ ಬಂಟರ ಯಾನೆ ನಾಡವರ ಜಾತಿಯಲ್ಲಿ ಆರು ಮಂದಿ ಶಾಸಕರಿದ್ದರೂ ಕೂಡ ಕುಂದಾಪುರದ ಅಪ್ಪಟ ಜಾತ್ಯಾತೀತವಾದಿ ಪ್ರಾಮಾಣಿಕ ಶಾಸಕರೆನಿಸಿಕೊಂಡಿರುವ ಸೋಲಿಲ್ಲದ ಸರದಾರ ಹಾಲಾಡಿಯವರ ಹೆಸರನ್ನು ಸಚಿವ ಸಂಪುಟಕ್ಕೆ ಪರಿಗಣಿಸದೇ ಇರುವುದು ಬಂಟರಿಗೆ ಮಾತ್ರವಲ್ಲ ಕುಂದಾಪುರದ ಮತದಾರರ ಮನಸ್ಸನ್ನು ಸಾಕಷ್ಟು ಘಾಸಿ ಮಾಡಿರುವುದಂತೂ ನೂರಕ್ಕೆ ನೂರು ಸತ್ಯ. ಮನಸ್ಸು ಮಾಡಿದ್ದರೆ ಕನಿಷ್ಠ ಪಕ್ಷ ಮೂರು ಕ್ಷೇತ್ರಗಳನ್ನು ಅಲುಗಾಡಿಸುವ ಶಕ್ತಿ ಕುಂದಾಪುರದ ವಾಜಪೇಯಿಗೆ ಇದೆ ಅನ್ನುವುದನ್ನು ಕರಾವಳಿಯ ಸರ್ವ ಜಾತಿ ವರ್ಗ ಅರಿತುಕೊಂಡಿದೆ ಅನ್ನುವುದು ಅಷ್ಟೇ ಸತ್ಯ.

ಒಂದಂತೂ ಸತ್ಯ, ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಜಾತಿಯ ಹೆಸರಿನಲ್ಲಿಯೇ ಪ್ರಮಾಣ ವಚನ ಮಾಡುವುದೊಂದೇ ಬಾಕಿ ಉಳಿದಿದೆ..! ಇದೊಂದು ಸಂಪ್ರದಾಯ ಬಂದು ಬಿಟ್ಟರೆ ನಮ್ಮ ಜಾತ್ಯತೀತ ಪದಕ್ಕೆ ಎಳ್ಳು ನೀರು ಬಿಟ್ಟ ಹಾಗೇ. ಬಂದರೂ ಆಶ್ಚರ್ಯವಿಲ್ಲ! ಕಾದು ನೋಡೋಣ.

ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.