Home ಓದುಗರ ಮನದಾಳ ಅಭಿವೃದ್ಧಿ ಕಾಣದ ಬೈಂದೂರು ನಾಕಟ್ಟೆ ರಸ್ತೆ

ಅಭಿವೃದ್ಧಿ ಕಾಣದ ಬೈಂದೂರು ನಾಕಟ್ಟೆ ರಸ್ತೆ

901
0

ಬೈಂದೂರು: ಬೈಂದೂರು ತಾಲೂಕು ಕೇಂದ್ರವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಈಗಾಗಲೇ ತಾಲ್ಲೂಕಿನ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲು ಜನಪ್ರತಿನಿಧಿಗಳು ಅವಿರತ ಪ್ರಯತ್ನ ಮಾಡಬೇಕಿದ್ದು ಆ ಕುರಿತು ಕೆಲ ಅಭಿವೃದ್ಧಿ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿದ್ದರೂ ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯಿಂದ ಸೀತಾರಾಮಚಂದ್ರ ದೇವಾಲಯದ ಭಾಗಕ್ಕೆ ನೇರ ಸಂಪರ್ಕ ಕಲ್ಪಿಸುವ ನಾಕಟ್ಟೆ ರಸ್ತೆ ಮಾತ್ರ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಾಗಿದ್ದು ಅಪಾಯ ಆಹ್ವಾನಿಸುತ್ತಿದೆ!

ಮಳೆ ಬಂದರೆ ಹೊಳೆಯಾಗುವ ರಸ್ತೆ!
ರಾಷ್ಟ್ರೀಯ ಹೆದ್ದಾರಿಯಿಂದ ತೀರಾ ತಗ್ಗು ಪ್ರದೇಶದಲ್ಲಿರುವ ಈ ರಸ್ತೆಯ ಕಾಂಕ್ರೀಟ್ ಸಂಪೂರ್ಣ ಕಿತ್ತು ಹೋಗಿದ್ದು ಮೊಳಕಾಲು ಮಟ್ಟಕ್ಕೆ ನೀರು ತುಂಬಿ ಹೊಳೆಯಂತೆ ಭಾಸವಾಗುತ್ತದೆ. ಕಿತ್ತು ಹೋದ ಕಾಂಕ್ರೀಟ್ ರಸ್ತೆ ಕೆಸರುಮಯವಾಗಿದ್ದು ರಸ್ತೆಯ ಬದಿಯಂಚು ಗಮನಿಸದೆ ಎಷ್ಟೋ ಬೈಕ್ ಸವಾರರು ಪೆಟ್ಟು ಮಾಡಿಕೊಂಡಿದ್ದಿದೆ. ಅದೆಷ್ಟೋ ವಾಹನಗಳು ಕೆಸರಿನಲ್ಲಿ ಹೂತು ಹೋದದ್ದಿದೆ. ಬೈಂದೂರಿನ ರಾಷ್ಟ್ರೀಯ ಹೆದ್ದಾರಿಯ ನಾಕಟ್ಟೆಯಿಂದ ಬೈಂದೂರು ಸೀತಾರಾಮಚಂದ್ರ ದೇವಾಲಯದ ಭಾಗಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಇದನ್ನು ಬಿಟ್ಟರೆ ಜನ ಬೈಂದೂರು ಪೇಟೆ ಇಲ್ಲ ಯಡ್ತರೆ ಜಂಕ್ಷನ್ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಈ ಕುರಿತು ಈಗಾಗಲೇ ಹಲವಾರು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಎನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಈಗಾಗಲೇ ಹಲವಾರು ಜನ ಈ ರಸ್ತೆಯಲ್ಲಿ ಪ್ರಯಾಣಿಸಿ ಅಪಘಾತಕ್ಕೊಳಗಾಗಿರುವುದರಿಂದ ಮುಂದೆ ಹೆಚ್ಚಿನ ಅನಾಹುತ ಆಗದಂತೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಎತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಇಲ್ಲಿನ ಜನತೆಯ ಆಗ್ರಹವಾಗಿದೆ. ಈಗಾಗಲೇ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದು ಸಂಭಂದಿಸಿದ ಇಲಾಖೆ ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆ ಪರಿಹರಿಸುವರೆಂಬ ನೀರೀಕ್ಷೆ ಜನರಲ್ಲಿದ್ದು ಕಾದು ನೋಡಬೇಕಿದೆ.

-ರವಿರಾಜ್ ಬೈಂದೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.