Home ಓದುಗರ ಮನದಾಳ ಜಿಲ್ಲಾಧಿಕಾರಿಗಳಿಗೆ ಪತ್ರ

ಜಿಲ್ಲಾಧಿಕಾರಿಗಳಿಗೆ ಪತ್ರ

998
0

ರಿಗೆ,
ಜಿಲ್ಲಾಧಿಕಾರಿಗಳು,
ಉಡುಪಿ ಜಿಲ್ಲೆ.

ಮಾನ್ಯರೇ,
ವಿಷಯ: ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವ ಬಗ್ಗೆ

ತಾ. 21.06.2021ರಿಂದ ಉಡುಪಿ ಜಿಲ್ಲೆಯಲ್ಲಿ ಜೂನ್ 11ರಿಂದ ಯಾವ ಲಾಕ್‌ಡೌನ್ ಮಾರ್ಗಸೂಚಿಗಳು ಜಿಲ್ಲಾಡಳಿತದಿಂದ ಘೋಷಿತವಾಗಿದೆ ಅದೇ ಮಾರ್ಗಸೂಚಿಗಳನ್ನು ಈಗಲೂ ಅನುಸರಿಸಬೇಕಾಗಿ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 2ನೇ ಅಲೆಯ ಲಾಕ್‌ಡೌನ್ ನಿಯಮಾವಳಿಗಳನ್ನು ನಾಗರಿಕರು ಪಾಲಿಸುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆ ಸೂಚ್ಯಂಕವು ಶೇ.5ಕ್ಕೂ ಕಡಿಮೆ ಇದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಗೊಳಿಸುವ ಅವಶ್ಯಕತೆ ಇದೆ. ಕೋವಿಡ್ -19 ಒಂದನೇ ಲಾಕ್‌ಡೌನ್‌ನಲ್ಲಿ ಕೆಲವು ಬ್ರಹತ್ ಮಳಿಗೆಗಳು ಉದ್ಯೋಗಿಗಳಿಗೆ ತಿಂಗಳ ಸಂಬಳವನ್ನು ನೀಡಿದೆ. ಕೆಲವರು ಅರ್ಧ ತಿಂಗಳ ಸಂಬಳ ಕೂಡಾ ನೀಡಿದ್ದಾರೆ. ಉದ್ಯೋಗಿಗಳು ತುಂಬಾ ಸಂಕಷ್ಟಕ್ಕೊಳಗಾದರು.

ಈಗ ಕೊರೊನಾ ಎರಡನೇ ಲಾಕ್‌ಡೌನ್ ಪ್ರಾರಂಭವಾಗಿ ಸುಮಾರು 2 ತಿಂಗಳು ಆಗುತ್ತಾ ಬರುತ್ತಿದೆ. ಬಟ್ಟೆ ಅಂಗಡಿಗಳು ಇನ್ನಿತರ ವ್ಯಾಪಾರದ ಅಂಗಡಿಗಳ ಉದ್ಯೋಗಿಗಳಿಗೆ ಮೇ ತಿಂಗಳ ಸಂಬಳ ಇನ್ನೂ ಬಂದಿಲ್ಲ. ಉದ್ಯೋಗಿಗಳಿಗೆ ಮನೆಸಾಲ, ದ್ವಿಚಕ್ರ ವಾಹನ ಸಾಲ, ಗೃಹೋಪಯೋಗಿ ಸಾಲಗಳ ಕಂತುಗಳನ್ನು ಕಟ್ಟಲು ಆಗುತ್ತಿಲ್ಲ. ಸಂಸಾರದ ದೈನಂದಿನ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗದೆ. ಜನ ಪರಿತಪಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೊಳಗಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕಳೆದ ಬಾರಿ ಬ್ಯಾಂಕುಗಳು ಸಾಲದ ಚಕ್ರ ಬಡ್ಡಿಯನ್ನು ಮಾತ್ರ ಮನ್ನಾ ಮಾಡಿ ಸರಳಬಡ್ಡಿಯನ್ನು ಮಾಸಿಕ ಕಂತುಗಳೊಂದಿಗೆ ವಸೂಲಾತಿ ಮಾಡಿವೆ. ಗೃಹ ಸಾಲ, ವಾಹನಗಳ ಸಾಲದ ಲಾಕ್‌ಡೌನ್ ಅವಧಿಯ ಕಂತುಗಳ ಬಡ್ಡಿಯನ್ನು ಸರಕಾರ ಮನ್ನಾ ಮಾಡಬೇಕಾಗಿ ವಿನಂತಿ.

ಇ.ಎಸ್.ಐ. (ಉದ್ಯೋಗಿಯ ರಾಜ್ಯ ವಿಮೆ) ಖಾತೆಯಲ್ಲಿ 60,000 ಕೋಟಿ ರೂಪಾಯಿ ಸಂಗ್ರಹವಾದ ಬಗ್ಗೆ ಮಾಹಿತಿ ಇದೆ. ಇದು ಉದ್ಯೋಗಿಗಳ ಸ್ವಂತ ಹಣ. ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಪ್ರತಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ನಿಧಿಯಾಗಿ 10,000 ರೂಪಾಯಿಗಳನ್ನು ವರ್ಗಾಯಿಸಬೇಕಾಗಿ ವಿನಂತಿ.

ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪೀಡಿತರ ಸಂಖ್ಯೆ 5%ಕ್ಕೂ ಕಡಿಮೆ ಇರುವುದರಿಂದ ಆದ್ಯತೆ ಮೇರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಟ್ಟೆ, ಸಿದ್ಧ ಉಡುಪುಗಳು, ರೈನ್ ಕೋಟ್ ಕೊಡೆ, ಚಪ್ಪಲಿ, ಕ್ಷೌರಿಕರು, ಫೋಟೊಗ್ರಾಫರ್ ಮುಂತಾದವರೆಲ್ಲರಿಗೂ ದಿನದ ಸೀಮಿತ ಅವಧಿಯಲ್ಲಿ ವಾರದ 6 ದಿನಗಳಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಭಾನುವಾರ ರಜಾದಿನವಾಗಿ ಘೋಷಿಸುವ ಅನಿವಾರ್ಯತೆ ಇದೆ.ಇಲ್ಲದಿದ್ದಲ್ಲಿ ತೀರ್ವ ಆರ್ಥಿಕ ಸಂಕಷ್ಟಕ್ಕೊಳಗಾಗುವುದು ಖಂಡಿತ. ಸಾರ್ವಜನಿಕರು ಕೂಡಾ ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿ ಜನಜಂಗುಳಿ ನಿರ್ಮಿಸದೆ ತಾಳ್ಮೆ, ಸಹನೆಯಿಂದ ತಮ್ಮ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಅಗತ್ಯವಿದೆ.

ಕೆ. ಜನಾರ್ಧನ ಭಂಡಾರ್ಕಾರ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.