ಮಂಗಳೂರು, ಅ.16: ಉತ್ತಮ ಪುಸ್ತಕಗಳನ್ನು ಓದುವುದರಿಂದ ಸಿಗುವ ಅನುಭವ ಮತ್ತು ಜ್ಞಾನ ನಮಗೆ ಬೇರೆ ಎಲ್ಲೂ ಸಿಗುವುದಿಲ್ಲ. ಆದರೆ ಈಗಿನ ಯುವಜನತೆ ಓದಿನ ಸುಖಾನುಭವದಿಂದ ದೂರ ಸರಿಯುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ. ಹೇಳಿದರು. ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಗ್ರಂಥಾಲಯ ಸಂಯುಕ್ತವಾಗಿ ಪುಸ್ತಕ ಪ್ರೀತಿ ಕಾರ್ಯಕ್ರಮದ ಅಂಗವಾಗಿ ಜ್ಞಾನಪೀಠ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಅವರ ಕೃತಿಗಳ ಪ್ರದರ್ಶನ, ಅವಲೋಕನ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿ ಕನಿಷ್ಠ ತಿಂಗಳಿಗೆ ಒಂದಾದರೂ ಸದಭಿರುಚಿಯ ಸಾಹಿತ್ಯ ಕೃತಿಯನ್ನು ಓದಿ ತಮ್ಮ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದ್ವಿತೀಯ ಎಂ.ಕಾಂ. ವಿದ್ಯಾರ್ಥಿನಿ ಶಿವಾನಿ ಇವರು ಕಾರಂತರ ‘ಸರಸಮ್ಮನ ಸಮಾಧಿ’, ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ನಾಗರತ್ನ ‘ಬೆಟ್ಟದ ಜೀವ’, ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಶಂಕ್ರಮ್ಮ ಮಂದಾಲ ‘ಅಳಿದ ಮೇಲೆ’, ದ್ವಿತೀಯ ಬಿ.ಎಸ್ಸಿಯ ವಿದ್ಯಾರ್ಥಿನಿ ಸ್ಮೃತಿ ‘ಮೂಕಜ್ಜಿಯ ಕನಸುಗಳು’, ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ವೈಷ್ಣವಿ ‘ಚೋಮನ ದುಡಿ’ ಪ್ರಥಮ ಬಿ.ಎ. ವಿದ್ಯಾರ್ಥಿನಿ ಶ್ರೀಜಾ ‘ಹೋಳಿಗೆ ಕಥೆ’ ಕೃತಿಗಳ ಅವಲೋಕನವನ್ನು ಪ್ರಸ್ತುತಪಡಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಹ-ಸಂಯೋಜಕಿ ಡಾ. ಜ್ಯೋತಿಪ್ರಿಯಾ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ವಸಂತಿ ಪಿ., ಗ್ರಂಥಪಾಲಕಿ ಕುಮಾರಿ ಉಮಾ ಎ.ಬಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ನಸೀಮಾ ಬೇಗಂ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಗಳಾದ ಹರ್ಷಿತಾ ಮತ್ತು ರಿಷಿತ ಪ್ರಾರ್ಥಸಿದರು. ಸೃಷ್ಟಿ ಸ್ವಾಗತಿಸಿ, ನಿರೂಪಿಸಿದರು. ಕಾವ್ಯ ವಂದಿಸಿದರು.




By
ForthFocus™