Home ಅಂಕಣ ನಿಮ್ಮ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಿ

ನಿಮ್ಮ ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸಿ

713
0

ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸ ಎಂದ ಕೂಡಲೇ ನೀವು ಭೇಟಿ ನೀಡಿದ ಹಲವಾರು ಪ್ರೇಕ್ಷಣೀಯ ಸ್ಥಳಗಳು ಕಣ್ಣೆದುರು ಹಾದು ಹೋಗಬಹುದು. ದಿನನಿತ್ಯದ ಜಂಜಾಟದ ಬದುಕಿಗೆ ಬ್ರೇಕ್ ನೀಡುವ ಸಲುವಾಗಿ ಬಹುತೇಕರು ಪ್ರವಾಸಕ್ಕೆ ಹೋಗುತ್ತಾರೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಪ್ರವಾಸವನ್ನು ಅರ್ಥಪೂರ್ಣವಾಗಿಸುತ್ತಾರೆ. ತಂತ್ರಜ್ಞಾನ ಬೆಳೆಯುತ್ತ ಹೋದ ಹಾಗೆ ಪ್ರವಾಸಕ್ಕೆ ಹೊಸ ಸ್ಪರ್ಶ ಸಿಕ್ಕಿದೆ ಎಂದರೆ ಅತಿಶಯವಾಗದು.

ಸೋಲೋ ಟ್ರಿಪ್: ಸೋಲೋ ಟ್ರಿಪ್ ಅಥವಾ ಒಂಟಿ ಪ್ರಯಾಣ ಎಂಬುವುದು ಈಗ ಟ್ರೆಂಡ್ ಆಗಿದೆ. ಒಬ್ಬರೇ ಪ್ರಯಾಣಕ್ಕೆ ಹೊರಡುವುದು. ಇದರಿಂದ ಹಲವಾರು ಉಪಯೋಗಗಳಿವೆ ಅದೇ ರೀತಿ ಸಮಸ್ಯೆಗಳೂ ಜೊತೆಯಲ್ಲಿರುತ್ತದೆ. ಆದರೆ ಸವಾಲುಗಳನ್ನು ಎದುರಿಸಿ ಒಂಟಿ ಪ್ರಯಾಣದಿಂದ ಸಿಗುವ ಮಜವೇ ಬೇರೆ.

ಯೂಟ್ಯೂಬ್ ದುನಿಯಾ: ಯೂಟ್ಯೂಬರ್ಸ್ ಸಮುದಾಯ ಬೆಳೆಯುತ್ತಿದೆ. ಇವರು ಹೆಗಲಿಗೆ ಕ್ಯಾಮರಾ ಹಾಕಿ, ಅಪರೂಪದ ಸ್ಥಳಗಳಿಗೆ ಹೋಗಿ ಸಂಪೂರ್ಣ ವಿವರಗಳನ್ನು ದಾಖಲೀಕರಿಸಿ ಇತರರಿಗೆ ಮಾಹಿತಿಯನ್ನು ನೀಡುತ್ತಾರೆ. ಟ್ರಾವೆಲ್ ವ್ಲಾಗ್ ಗಳಲ್ಲಿ ಕುತೂಹಲಕಾರಿ ಮಾಹಿತಿಯನ್ನು ನೀಡಲು ಈಗಂತೂ ಯೂಟ್ಯೂಬರ್ಸ್ ಗಳ ನಡುವೆ ಪೈಪೋಟಿ ಆರಂಭವಾಗಿದೆ.

ಪ್ರವಾಸವನ್ನು ಅವಿಸ್ಮರಣೀಯವನ್ನಾಗಿಸುವುದು ಹೇಗೆ?

ಪ್ರವಾಸಕ್ಕೊಂದು ಅರ್ಥವಿರಲಿ:
ನೀವು ಪ್ರವಾಸಕ್ಕೆ ಹೊರಡುವ ಮುನ್ನ ಸ್ಥಳವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ. ಈಗಾಗಲೇ ಹಲವಾರು ಬಾರಿ ಭೇಟಿ ನೀಡಿದ ಸ್ಥಳಗಳಿಗೆ ಪುನಃ ಹೋಗುವುದಕ್ಕಿಂತ ಇಲ್ಲಿಯವರೆಗೆ ನೋಡದ ಸ್ಥಳಗಳಿಗೆ ಹೋದರೆ ಪ್ರವಾಸಕ್ಕೊಂದು ಅರ್ಥ ಬರುತ್ತದೆ.

ಜೀವದ ಬಗ್ಗೆ ಇರಲಿ ಕಾಳಜಿ:
ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿಯೇ ಅದೆಷ್ಟೋ ಅವಘಡಗಳು ಸಂಭವಿಸಿವೆ. ಬಂಡೆಗಳನ್ನು ಹತ್ತುವಾಗ ಕಾಲು ಜಾರಿ ಜೀವಕ್ಕೆ ಹಾನಿಯುಂಟು ಮಾಡಿದ ಘಟನೆಗಳು ಒಂದೆಡೆಯಾದರೆ, ಸೆಲ್ಫೀ ಹುಚ್ಚಿಗೆ ನೀರಿನಲ್ಲಿ ಮುಳುಗಿ, ಆಯ ತಪ್ಪಿ ಬೆಟ್ಟ ಗುಡ್ಡಗಳ ಕೆಳಗೆ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಅಲ್ಲಲ್ಲಿ ವರದಿಯಾಗುತ್ತಿವೆ. ಆದ್ದರಿಂದ ಸೆಲ್ಫೀ ಕ್ಲಿಕ್ಕಿಸುವ ಮೊದಲು ಹಿಂದೆ ಮುಂದೆ ಸರಿಯಾಗಿ ನೋಡಿ ಸುರಕ್ಷತೆಗೆ ಆದ್ಯತೆ ನೀಡಿ. ಪ್ರವಾಸಿ ಸ್ಥಳಗಳಲ್ಲಿ ಸರಕಾರದಿಂದ ಅಳವಡಿಸಿರುವ ಮುಂಜಾಗ್ರತೆಯ ಸೂಚನಾ ಫಲಕಗಳನ್ನು ಸರಿಯಾಗಿ ಓದಿ ಅಲ್ಲಿರುವ ನಿಯಮಗಳನ್ನು ಪಾಲಿಸಿ.

ಒಂದಿಷ್ಟು ಮಾಹಿತಿ ಕಲೆ ಹಾಕಿ:
ಸುಮ್ಮನೆ ಹೋದ ಪುಟ್ಟ ಬಂದ ಪುಟ್ಟ ಆಗುವುದಕ್ಕಿಂತ ನಿಮ್ಮ ಪ್ರವಾಸದ ಸಂದರ್ಭದಲ್ಲಿ ಕಿರು ಅಧ್ಯಯನವನ್ನು ಮಾಡಲು ಪ್ರಯತ್ನಿಸಿ. ನೀವು ಭೇಟಿ ನೀಡುವ ಸ್ಥಳ ಕೋಟೆ, ಅರಮನೆ ಇತ್ಯಾದಿಗಳಾದಲ್ಲಿ ಅದು ಎಷ್ಟನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಯಾವ ರಾಜಮನೆತನದವರು ನಿರ್ಮಿಸಿದ್ದು, ಅಲ್ಲಿ ಶಿಲಾಶಾಸನ, ವೀರಗಲ್ಲು ಇತ್ಯಾದಿ ಇದೆಯೇ ಎಂಬಿತ್ಯಾದಿ ಅಂಶಗಳನ್ನು ವಿವಿಧ ಮೂಲಗಳಿಂದ ತಿಳಿದುಕೊಳ್ಳಿ. ನೀವು ಹೊರಡುವ ಸ್ಥಳದಿಂದ ಅದು ಎಷ್ಟು ದೂರದಲ್ಲಿದೆ, ಜಿಲ್ಲಾ/ತಾಲೂಕು ಕೇಂದ್ರದಿಂದ ಅದು ಎಷ್ಟು ದೂರದಲ್ಲಿದೆ, ಹೇಗೆ ತಲುಪುವುದು ಈ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಿ.

ಪ್ರವಾಸ ಕಥನ ಬರೆಯಿರಿ:
ನೀವು ಭೇಟಿ ನೀಡಿದ ಸ್ಥಳಗಳ ಬಗ್ಗೆ ಲೇಖನ ಬರೆಯಿರಿ. ಮೊದಲ ಲೇಖನ ಹಾಸ್ಯಾಸ್ಪದ ಆಗಿ ಭಾಸವಾಗಬಹುದು, ಆದರೆ ನಿರಂತರವಾಗಿ ಬರೆದರೆ ನಿಮಗೊಂದು ಹಿಡಿತ ಸಿಗುತ್ತದೆ ಮಾತ್ರವಲ್ಲದೇ ಅದೊಂದು ಶಾಶ್ವತವಾದ ಆಕರಸೂಚಿಯಾಗುತ್ತದೆ. ಈಗಾಗಲೇ 25ಕ್ಕಿಂತ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿದರೆ ಒಂದು ಗ್ರಂಥವೇ ನಿಮ್ಮಿಂದ ಪ್ರಕಟವಾಗಬಹುದು. ಇದರಿಂದ ಸಾವಿರಾರು ಜನರಿಗೆ ಉಪಯೋಗವಾಗುತ್ತದೆ.

ಸ್ವಚ್ಛತೆಯನ್ನು ಕಾಪಾಡಿ:
ಪ್ರವಾಸಿ ಸ್ಥಳಗಳು ಡಂಪಿಂಗ್ ಯಾರ್ಡ್ ಆಗದಿರಲಿ. ಆಹಾರ ಪೊಟ್ಟಣಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಅಲ್ಲಿ ಕಸದ ಬುಟ್ಟಿ ಇದ್ದರೆ ಅದರಲ್ಲಿ ಹಾಕಿ. ಸಾಧ್ಯವಾದರೆ ಚಾರಣಕ್ಕೆ ಅಥವಾ ಪ್ರವಾಸಿ ಸ್ಥಳದತ್ತ ಹೆಜ್ಜೆ ಹಾಕುವಾಗ ಅಲ್ಲಿ ಪ್ಲಾಸ್ಟಿಕ್, ಇತ್ಯಾದಿ ತ್ಯಾಜ್ಯಗಳು ಬಿದ್ದಿದ್ದರೆ ಅದನ್ನು ಹೆಕ್ಕುವ ಮೂಲಕ ನಿಮ್ಮ ಪ್ರವಾಸ ಇತರರಿಗೆ ಪ್ರೇರಣೆ ಮತ್ತು ಮಾದರಿ ಆಗುವುದು. ನಾವು ಬದಲಾದರೆ ಮಾತ್ರ ಸಮಾಜ ಬದಲಾಗುತ್ತದೆ.

ಮುಂಚಿತವಾಗಿಯೇ ಯೋಜನೆ ರೂಪಿಸಿ:
ಬೆಳಿಗ್ಗೆ ಎದ್ದ ತಕ್ಷಣ ಇಲ್ಲಿ ಹೋಗುವ ಎಂದು ಗಡಿಬಿಡಿ ಮಾಡಿ ಪ್ರವಾಸಕ್ಕೆ ಹೋದರೆ ಏನೂ ಪ್ರಯೋಜನವಾಗುವುದಿಲ್ಲ. ಅದರ ಬದಲಿಗೆ ಎಲ್ಲಿಗೆ ಭೇಟಿ ನೀಡಬಹುದು ಎಂದು ವಾರದ ಮೊದಲೇ ನಿರ್ಣಯ ಮಾಡಿ ಅದಕ್ಕೆ ಸೂಕ್ತವಾದ ಯೋಜನೆಯನ್ನು ರೂಪಿಸಿ ತಯಾರಿಯನ್ನು ನಡೆಸಿದರೆ ಪ್ರವಾಸವು ಅರ್ಥಪೂರ್ಣವಾಗುವುದು.

ಸಭ್ಯತೆಯಿಂದ ನಡೆದುಕೊಳ್ಳಿ:
ಪುರಾತತ್ವ ಇಲಾಖೆ ಹಲವಾರು ಕಡೆಗಳಲ್ಲಿ ಪುರಾತನ ವಸ್ತುಗಳನ್ನು ಸಂರಕ್ಷಿಸಿ ಬಂದಿದೆ. ಇಂತಹ ಕಡೆಗಳಲ್ಲಿ ಯಾವುದೇ ರೀತಿಯಲ್ಲಿ ಹಾನಿ ಉಂಟುಮಾಡಬೇಡಿ. ಸಭ್ಯತೆಯಿಂದ ನಡೆದುಕೊಳ್ಳಿ.

-ಗಣೇಶ್ ಪ್ರಸಾದ್ ಜಿ. ನಾಯಕ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.