Sunday, March 22, 2026
Sunday, March 22, 2026

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ; ಭಾರತೀಯ ವಿಜ್ಞಾನಿಗಳ ಕೊಡುಗೆ

ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ; ಭಾರತೀಯ ವಿಜ್ಞಾನಿಗಳ ಕೊಡುಗೆ

Date:

ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸುವ ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಒಂದು ಆಚರಣೆಯ ದಿನವಲ್ಲ; ಅದು ಭಾರತದ ವೈಜ್ಞಾನಿಕ ಸಾಧನೆಗಳನ್ನು ಸ್ಮರಿಸುವ ಮಹತ್ವದ ಕ್ಷಣವಾಗಿದೆ. 1928ರಲ್ಲಿ ಸಿ.ವಿ.ರಾಮನ್ ಅವರು ‘ರಾಮನ್ ಇಫೆಕ್ಟ್’ ಕಂಡುಹಿಡಿದ ದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಅವರ ಈ ಮಹತ್ವದ ಆವಿಷ್ಕಾರಕ್ಕೆ 1930ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಲಭಿಸಿದೆ. ಈ ಸಾಧನೆಯ ಮೂಲಕ ಭಾರತವು ಜಾಗತಿಕ ವಿಜ್ಞಾನ ಲೋಕದಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿತು.

ಅದೇ ಕಾಲಘಟ್ಟದಲ್ಲಿ ಗಣಿತಶಾಸ್ತ್ರದ ಅದ್ಭುತ ಪ್ರತಿಭೆ ಶ್ರೀನಿವಾಸ ರಾಮಾನುಜನ್ ಅವರು ಸಂಖ್ಯಾ ಸಿದ್ಧಾಂತದಲ್ಲಿ ನೀಡಿದ ಕೊಡುಗೆಗಳು ಇಂದಿಗೂ ವಿಶ್ವದ ಗಣಿತ ಅಧ್ಯಯನದಲ್ಲಿ ಮಹತ್ವವನ್ನು ಹೊಂದಿವೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಜಗತ್ತಿನ ಶ್ರೇಷ್ಠ ಗಣಿತಜ್ಞರ ಸಾಲಿನಲ್ಲಿ ನಿಂತದ್ದು ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.

ಸ್ವಾತಂತ್ರ್ಯಾನಂತರ ಭಾರತದ ವಿಜ್ಞಾನಾಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದವರಲ್ಲಿ ವಿಕ್ರಂ ಸಾರಾಭಾಯ್ ಪ್ರಮುಖರು. ಅವರ ದೂರದೃಷ್ಟಿಯಿಂದ Indian Space Research Organisation (ಇಸ್ರೋ) ಸ್ಥಾಪನೆಯಾಯಿತು. ಇಂದಿಗೆ ಇಸ್ರೋ ಉಪಗ್ರಹ ಉಡಾವಣೆ, ಹವಾಮಾನ ಮುನ್ಸೂಚನೆ, ಚಂದ್ರಯಾನ ಮತ್ತು ಮಂಗಳಯಾನ ಮಿಷನ್‌ಗಳ ಮೂಲಕ ವಿಶ್ವದ ಗಮನ ಸೆಳೆದಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ವಿದ್ಯಾರ್ಥಿಗಳಿಗೆ ಅಂತರಿಕ್ಷ ವಿಜ್ಞಾನವು ಇದೀಗ ಕನಸಲ್ಲ, ಸಾಧ್ಯತೆಯ ಮಾರ್ಗವಾಗಿದೆ.

ಅಣುಶಕ್ತಿಯ ಕ್ಷೇತ್ರದಲ್ಲಿ ಹೋಮಿ ಜೆ. ಬಾಬಾ ಅವರು ಭಾರತದ ಅಣುಶಕ್ತಿ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದರು. ಅವರು ಸ್ಥಾಪಿಸಿದ Tata Institute of Fundamental Research ಮೊದಲಾದ ಸಂಶೋಧನಾ ಸಂಸ್ಥೆಗಳು ವಿಜ್ಞಾನಾಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿವೆ.

ಕೃಷಿ ಕ್ಷೇತ್ರದಲ್ಲಿ ಎಂ.ಎಸ್. ಸ್ವಾಮಿನಾಥನ್ ಅವರ ಹಸಿರು ಕ್ರಾಂತಿ ಭಾರತದ ಆಹಾರ ಭದ್ರತೆಯನ್ನು ಬಲಪಡಿಸಿತು. ಹೆಚ್ಚಿನ ಉತ್ಪಾದನಾ ತಳಿಗಳ ಪರಿಚಯದಿಂದ ದೇಶ ಆಹಾರ ಕೊರತೆಯಿಂದ ಆತ್ಮನಿರ್ಭರತೆಗೆ ಸಾಗಿತು. ಕೃಷಿ ಪ್ರಧಾನ ದೇಶವಾದ ಭಾರತಕ್ಕೆ ಇದು ಮಹತ್ವದ ಸಾಧನೆಯಾಗಿದೆ.

ರಕ್ಷಣಾ ಹಾಗೂ ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು “ಭಾರತದ ಕ್ಷಿಪಣಿ ಮಾನವ” ಎಂದು ಪ್ರಸಿದ್ಧರಾದರು. ಅವರ ಸಾಧನೆಗಳು ಮತ್ತು ಯುವಜನತೆಯ ಮೇಲೆ ಪ್ರೇರಣಾದಾಯಕ ಪ್ರಭಾವ ಇಂದಿಗೂ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿವೆ.

ಕರ್ನಾಟಕವು ಸಹ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿದ್ದು, ಅನೇಕ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಇಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆಗಳು ಭವಿಷ್ಯದ ವಿಜ್ಞಾನಿಗಳಾಗುವ ಸಾಮರ್ಥ್ಯ ಹೊಂದಿವೆ.

ಚಂದ್ರಶೇಖರ ವೆಂಕಟರಾಮನ್ ನವೆಂಬರ್ 7 1888 ತಮಿಳುನಾಡಿನ ತಿರುಚಿರಾಪ್ಪಳ್ಳಿಯಲ್ಲಿ ಜನಿಸಿದರು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಮತ್ತು ಭೌತಶಾಸ್ತ್ರ ಉಪನ್ಯಾಸಕರಾಗಿದ್ದರು. ತಂದೆಯ ವಿದ್ಯಾಭ್ಯಾಸದ ಹಿನ್ನೆಲೆ ರಾಮನ್ ಅವರಿಗೆ ಬಾಲ್ಯದಲ್ಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿತು. ಅವರು ಬಾಲ್ಯದಲ್ಲೇ ಅತಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಕೇವಲ 11ನೇ ವಯಸ್ಸಿನಲ್ಲಿ ಮ್ಯಾಟ್ರಿಕ್ಯುಲೇಶನ್ ಉತ್ತೀರ್ಣರಾದರು.  13ನೇ ವಯಸ್ಸಿನಲ್ಲಿ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಪಾಸಾದರು. ನಂತರ ಚೆನ್ನೈ (ಅಂದಿನ ಮದ್ರಾಸ್) ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಅವರು 16ನೇ ವಯಸ್ಸಿನಲ್ಲಿ ಭೌತಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದು ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕವನ್ನು ಗಳಿಸಿದರು. ನಂತರ ಎಂ.ಎ. ಪದವಿಯನ್ನು ಅತ್ಯುತ್ತಮ ಸಾಧನೆಯೊಂದಿಗೆ ಪೂರ್ಣಗೊಳಿಸಿದರು. ವಿಜ್ಞಾನ ಸಂಶೋಧನೆಗೆ ಆಳವಾದ ಆಸಕ್ತಿ ಇದ್ದರೂ, 1907ರಲ್ಲಿ ಅವರು ಭಾರತೀಯ ಹಣಕಾಸು ಸೇವೆಯಲ್ಲಿ ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಕೋಲ್ಕತಾ ನಗರದಲ್ಲಿ ಕೆಲಸಕ್ಕೆ ಸೇರಿದರು. ಆದರೆ ವಿಜ್ಞಾನ ಪ್ರೇಮ ಕಡಿಮೆಯಾಗಲಿಲ್ಲ. ಕಚೇರಿ ಕೆಲಸದ ನಂತರ ಅವರು ಇಂಡಿಯನ್ ಅಸೋಸಿಯೇಷನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್ (IACS) ನಲ್ಲಿ ಸಂಶೋಧನೆ ನಡೆಸುತ್ತಿದ್ದರು.

ಅವರ ನಿಷ್ಠೆ ಮತ್ತು ಸಂಶೋಧನೆ ಮೇಲಿನ ಪ್ರೀತಿ ಅವರಿಗೆ ಸರ್ಕಾರದ ಉದ್ಯೋಗವನ್ನು ತ್ಯಜಿಸಿ ಪೂರ್ಣಕಾಲಿಕ ವಿಜ್ಞಾನಿಯಾಗಿ ಮತ್ತು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿತು. 1928ರಲ್ಲಿ ರಮನ್ ಪರಿಣಾಮದ ಆವಿಷ್ಕಾರವು ಆಕಸ್ಮಿಕವಾಗಿ ಸಂಭವಿಸಿದುದಲ್ಲ. ಅದು ಸಿ.ವಿ. ರಮನ್ ಅವರ ಹಲವು ವರ್ಷಗಳ ಕುತೂಹಲ, ನಿರಂತರ ಪರಿಶ್ರಮ ಮತ್ತು ವೈಜ್ಞಾನಿಕ ಪ್ರಯೋಗಗಳ ಫಲಿತಾಂಶವಾಗಿತ್ತು.

ಸಮುದ್ರದ ನೀಲಿ ಬಣ್ಣದ ಬಗ್ಗೆ ಕುತೂಹಲ: 1921ರಲ್ಲಿ ಯುರೋಪಿನಿಂದ ಹಡಗಿನಲ್ಲಿ ಭಾರತಕ್ಕೆ ಮರಳುವಾಗ, ಮೆಡಿಟೆರೇನಿಯನ್ ಸಮುದ್ರದ ಗಾಢ ನೀಲಿ ಬಣ್ಣ ಸಿ.ವಿ. ರಾಮನ್ ಅವರ ಗಮನ ಸೆಳೆಯಿತು. ಅಂದು ಬಹುತೇಕರು ಸಮುದ್ರವು ಆಕಾಶದ ಪ್ರತಿಫಲನದಿಂದ ನೀಲಿಯಾಗಿ ಕಾಣುತ್ತದೆ ಎಂದು ನಂಬಿದ್ದರು. ಆದರೆ ಈ ಉತ್ತರದಿಂದ ರಮನ್ ತೃಪ್ತರಾಗಲಿಲ್ಲ. ಬೆಳಕು ಮತ್ತು ನೀರಿನ ಪರಸ್ಪರ ಕ್ರಿಯೆಯನ್ನು ಅಧ್ಯಯನ ಮಾಡಲು ಅವರು ನಿರ್ಧರಿಸಿದರು.

ಭಾರತದಲ್ಲಿಯೇ ಸ್ವತಂತ್ರ ಸಂಶೋಧನೆ: ಅವರು ಕೋಲ್ಕತ್ತಾದ ಭಾರತೀಯ ವಿಜ್ಞಾನ ಸಂಘದಲ್ಲಿ ಅತಿ ಸರಳ ಸಾಧನಗಳೊಂದಿಗೆ ತಮ್ಮ ಪ್ರಯೋಗಗಳನ್ನು ನಡೆಸಿದರು. ಪಾಶ್ಚಾತ್ಯ ದೇಶಗಳ ವಿಜ್ಞಾನಿಗಳಂತೆ ಅತ್ಯಾಧುನಿಕ ಪ್ರಯೋಗಾಲಯಗಳಿಲ್ಲದಿದ್ದರೂ, ಸೀಮಿತ ಸೌಲಭ್ಯಗಳಲ್ಲಿಯೇ ಮಹತ್ವದ ಸಂಶೋಧನೆ ಮಾಡಬಹುದು ಎಂದು ಅವರು ಸಾಬೀತುಪಡಿಸಿದರು.

ಬೆಳಕಿನ ಚದರಿಕೆಯ ಕುರಿತು ನಿರಂತರ ಪ್ರಯೋಗಗಳು:  ರಾಮನ್ ಮತ್ತು ಅವರ ಶಿಷ್ಯ ಕೆ. ಎಸ್. ಕೃಷ್ಣನ್ ಹಲವು ಬಾರಿ ಬೆಳಕು ದ್ರವ ಮತ್ತು ಸ್ಫಟಿಕಗಳ ಮೂಲಕ ಹಾದುಹೋಗುವಾಗ ಅದರ ಚದರಿಕೆಯನ್ನು ಅಧ್ಯಯನ ಮಾಡಿದರು. ಆರಂಭದಲ್ಲಿ ಸೂರ್ಯನ ಬೆಳಕನ್ನು, ನಂತರ ಹೆಚ್ಚು ನಿಖರತೆಯಿಗಾಗಿ ಮರ್ಕ್ಯುರಿ ದೀಪವನ್ನು ಬಳಸಿದರು. ಅವರು ಚದರಿತ ಬೆಳಕಿನ ಒಂದು ಸಣ್ಣ ಭಾಗದ ತರಂಗದೈರ್ಘ್ಯದಲ್ಲಿ ಬದಲಾವಣೆ ಉಂಟಾಗುವುದನ್ನು ಗಮನಿಸಿದರು.

ರಾಮನ್ ಇಫೆಕ್ಟ್ ಎಂದರೇನು?: ಬೆಳಕು ಒಂದು ಪಾರದರ್ಶಕ ವಸ್ತುವಿನ (ಉದಾ: ನೀರು, ಗಾಜು, ವಾಯು) ಮೂಲಕ ಹಾದುಹೋಗುವಾಗ ಅದರ ಒಂದು ಸಣ್ಣ ಭಾಗದ ತರಂಗದೈರ್ಘ್ಯ (wavelength) ಬದಲಾಗುತ್ತದೆ. ಈ ಬೆಳಕಿನ ಚದರಿಕೆ (ಸ್ಕ್ಯಾಟರಿಂಗ್) ವೇಳೆ ಉಂಟಾಗುವ ತರಂಗದೈರ್ಘ್ಯದ ಬದಲಾವಣೆಯನ್ನೇ Raman Effect ಎಂದು ಕರೆಯುತ್ತಾರೆ. ಸರಳವಾಗಿ ಹೇಳುವುದಾದರೆ, ಬೆಳಕು ವಸ್ತುವಿನ ಅಣುಗಳೊಂದಿಗೆ ಸಂವಹನ ಮಾಡಿದಾಗ ಅದರ ಶಕ್ತಿಯಲ್ಲಿ ಸ್ವಲ್ಪ ಬದಲಾವಣೆ ಉಂಟಾಗುತ್ತದೆ. ಇದರಿಂದ ಹೊರಬರುವ ಬೆಳಕಿನ ಬಣ್ಣ ಅಥವಾ ತರಂಗದೈರ್ಘ್ಯ (wavelength) ಬದಲಾಗುತ್ತದೆ.

ರಾಷ್ಟ್ರೀಯ ವಿಜ್ಞಾನ ದಿನವು ಕೇವಲ ಭೂತಕಾಲದ ಸಾಧನೆಗಳನ್ನು ಸ್ಮರಿಸುವ ದಿನವಲ್ಲ; ಅದು ವಿಜ್ಞಾನ ಮನೋಭಾವವನ್ನು ಬೆಳೆಸುವ ದಿನವೂ ಆಗಿದೆ. ಹವಾಮಾನ ಬದಲಾವಣೆ, ಆರೋಗ್ಯ, ಡಿಜಿಟಲ್ ಪರಿವರ್ತನೆ ಮುಂತಾದ ಆಧುನಿಕ ಸವಾಲುಗಳನ್ನು ಎದುರಿಸಲು ವಿಜ್ಞಾನ ಮತ್ತು ಸಂಶೋಧನೆ ಅತ್ಯಗತ್ಯ.

ಈ ಸಂದರ್ಭದಲ್ಲಿ ನಾವು ವಿಜ್ಞಾನಿಗಳನ್ನು ಗೌರವಿಸುವುದರ ಜೊತೆಗೆ, ನಮ್ಮ ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಸಂಶೋಧನಾ ಮನೋಭಾವವನ್ನು ಉತ್ತೇಜಿಸಬೇಕು. ಭಾರತದ ಭವಿಷ್ಯವು ಹೊಸ ಆವಿಷ್ಕಾರಗಳಲ್ಲಿ, ಹೊಸ ಆಲೋಚನೆಗಳಲ್ಲಿ ಮತ್ತು ಯುವ ವಿಜ್ಞಾನಿಗಳ ಕನಸುಗಳಲ್ಲಿ ಅಡಗಿದೆ.

– ಡಾ. ಗಣೇಶ್ ಪ್ರಸಾದ್ ಜಿ. ನಾಯಕ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಸಾವರಿ ಶಾನಭಾಗ್ ನಿಧನ

ಕುಂದಾಪುರ, ಮಾ.22: ಕುಂದಾಪುರದ ಸದಾರಂಗ ಸಂಗೀತ ವಿದ್ಯಾಲಯದ ಸಂಸ್ಥಾಪಕರು ಆಲ್ ಇಂಡಿಯಾ...

ಮಾ. 24, ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಮಾ.21: ಮೆಸ್ಕಾಂ ಕಾಪು ಉಪವಿಭಾಗ ಕಛೇರಿಯಲ್ಲಿ ಮಾರ್ಚ್ 24 ರಂದು...

ಪ್ರಸಾದ ಎಸಳು ಚರ್ಚಾಗೋಷ್ಠಿ

ಮಂಗಳೂರು, ಮಾ.21: ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ 'ಪ್ರಸಾದ ಎಸಳು'...

ಸರಕಾರಿ ಯೋಜನೆಗಳು ಫಲಾನುಭವಿಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಮಾ.21: 2025–26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ...
error: Content is protected !!