ಕೋಲ್ಕತಾ, ನ.5: (ಉಡುಪಿ ಬುಲೆಟಿನ್ ವರದಿ) ರವಿವಾರ ಇಲ್ಲಿಯ ಈಡನ್ ಗಾರ್ಡನ್ ಸ್ಟೇಡಿಯಮ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 243 ರನ್ ಗಳ ಬೃಹತ್ ಗೆಲುವನ್ನು ಸಾಧಿಸಿ ಅಜೇಯ ಪಯಣ ಮುಂದುವರಿಸಿದೆ. ಟಾಸ್ ಗೆದ್ದ ರೋಹಿತ್ ಪಡೆ ಮೊದಲು ಬ್ಯಾಟಿಂಗ್ ನಡೆಸಿತು. ಮೊದಲ ಓವರ್ ನಲ್ಲೇ ಆಕ್ರಮಣಕಾರಿಯಾಗಿ ಆಡಲು ಆರಂಭಿಸಿದ ರೋಹಿತ್ ಶರ್ಮಾ-ಶುಭ್ಮನ್ ಗಿಲ್ ಜೋಡಿ, 5.5 ಓವರ್ ಗಳಲ್ಲಿ 62 ರನ್ ಜತೆಯಾಟ ನೀಡಿದರು. ನಾಯಕ ರೋಹಿತ್ ಶರ್ಮಾ 24 ಎಸೆತಗಳಲ್ಲಿ, 2 ಸಿಕ್ಸ್ ಮತ್ತು 6 ಬೌಂಡರಿಗಳ ಮೂಲಕ 40 ರನ್ ಗಳಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಉತ್ತಮ ಲಯ ಕಂಡುಕೊಂಡಿದ್ದ ಗಿಲ್ ಅವರನ್ನು ಕೇಶವ್ ಮಹಾರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಉತ್ತಮ ಜತೆಯಾಟ ನೀಡುವ ಭರವಸೆ ಮೂಡಿಸಿದ ವಿರಾಟ್ ಕೊಹ್ಲಿ- ಶ್ರೇಯಸ್ ಐಯ್ಯರ್ ಜೋಡಿ ಮೂರನೇ ವಿಕೆಟ್ ಗೆ 134 ರನ್ ಜತೆಯಾಟ ನೀಡಿದರು. ಶ್ರೇಯಸ್ ಐಯ್ಯರ್ 77 ರನ್ ಗಳಿಸಿದರು.
ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ: ವಿರಾಟ್ ಕೊಹ್ಲಿ 49ನೇ ಏಕದಿನ ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದರು. ಕೊಹ್ಲಿ ಅಜೇಯ 101 ರನ್ ಗಳಿಸಿ ಸಿಟಿ ಆಫ್ ಜಾಯ್ ನಲ್ಲಿ ತನ್ನ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ರವೀಂದ್ರ ಜಡೇಜಾ ಕೇವಲ 15 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. 50 ಓವರ್ ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 326 ರನ್ ಪೇರಿಸಿತು.
ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಮೊಹಮ್ಮದ್ ಸಿರಾಜ್ ಮೊದಲ ಆಘಾತ ನೀಡಿದರು. ಕ್ವಿಂಟನ್ ಡಿಕಾಕ್ 5 ರನ್ ಗಳಿಸಿ ಸಿರಾಜ್ ಗೆ ಬಲಿಯಾದರು. ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಭಾರತದ ಬೌಲರ್ ಗಳ ದಾಳಿಗೆ ಧೂಳೀಪಟವಾಯಿತು. ಕೇವಲ 27.1 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 83 ರನ್ನುಗಳಿಗೆ ಸರ್ವಪತನವಾಯಿತು.
ರವೀಂದ್ರ ಜಡೇಜಾ 5 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಶಿಸ್ತುಬದ್ಧ ಬೌಲಿಂಗ್ ನಡೆಸಿದ ಕುಲದೀಪ್ ಯಾದವ್ 5.1 ಓವರ್ ಗಳಲ್ಲಿ ಕೇವಲ 7 ರನ್ ನೀಡಿದರು. 49ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಆಡಿರುವ ಎಲ್ಲಾ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಶ್ರೀಲಂಕಾವನ್ನು ಎರಡಂಕಿಗೆ ಆಲ್ ಔಟ್ ಮಾಡಿದ ಭಾರತ, ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಅದೇ ರೀತಿ ಕಟ್ಟಿಹಾಕುವ ಮೂಲಕ ಮತ್ತೊಮ್ಮೆ ಬಲಿಷ್ಠ ಬೌಲಿಂಗ್ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ.