ಬೆಂಗಳೂರು: ಗಣರಾಜ್ಯೋತ್ಸವದಲ್ಲಿ ರಾಜಪಥದಲ್ಲಿ ಪ್ರದರ್ಶನಗೊಂಡ ರಾಜ್ಯದ ‘ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು’ ವಿಷಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ದೊರೆತಿದೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ, ಕರ್ನಾಟಕದ ಸ್ತಭ್ದ ಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’ ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಗೌರವವೂ ನಮ್ಮೆಲ್ಲರನ್ನು ವೋಕಲ್ ಫಾರ್ ಆಗಲು ಪ್ರೇರೇಪಿಸಲಿ, ಮತ್ತು ನಮ್ಮ ರಾಜ್ಯದ ಕರಕುಶಲಕರ್ಮಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸಲಿ ಮತ್ತು ಆತ್ಮನಿರ್ಭರ ಭಾರತ ವನ್ನು ನಿರ್ಮಿಸಲು ಸಹಕರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸ್ತಬ್ಧ ಚಿತ್ರದ ಪ್ರಮುಖಾಂಶ:
ಮುಂಭಾಗ, ಬೀಟೆ, ದಂತದ ಕಸೂತಿ ಕೆತ್ತನೆಯ ಆನೆ, ಕೆಳಭಾಗ ಯಕ್ಷಗಾನದ ಚಿತ್ರಣ, ಗಂಜೀಫಾ ಕಲಾಕೃತಿ. ಮಧ್ಯಭಾಗದಲ್ಲಿ, ಬಿದರಿ ಕಲೆಯಿಂದ ರೂಪಿಸಿದ ಹೂಜಿ, ಭೂತಾರಾಧನೆಯ ಕಲಾಕೃತಿ. ಕೊನೆಯಲ್ಲಿ ಕರಕುಶಲ ಉತ್ಪನ್ನಗಳನ್ನು ಪ್ರೋತ್ಸಾಹಿಸಿದ ಕನ್ನಡತಿ, ಹೋರಾಟಗಾರ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಕಲಾಕೃತಿ.
ಕಲಾ ನಿರ್ದೇಶಕ ಶಶಿಧರ್ ಅಡಪ ನೇತೃತ್ವದ ಪ್ರತಿರೂಪಿ ಸಂಸ್ಥೆಯ ನೂರಕ್ಕೂ ಹೆಚ್ಚು ಕಲಾವಿದರು, ಸಂಗೀತ ನಿರ್ದೇಶಕ ಪ್ರವೀಣ್ ದಯಾನಂದ ರಾವ್ ತಂಡ, ಜಾನಪದ ತಜ್ಞ ಡಾ. ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ತಂಡ ಇದಕ್ಕಾಗಿ ಶ್ರಮಿಸಿದೆ.