Home ಅಂಕಣ ಗೊಂಬೆ ಆಡಿಸುವವರು ಮತ್ತು ಸೂತ್ರದ ಗೊಂಬೆಗಳು!

ಗೊಂಬೆ ಆಡಿಸುವವರು ಮತ್ತು ಸೂತ್ರದ ಗೊಂಬೆಗಳು!

771
0

ನಗೆ ಮೊದಲೇ ಗೊತ್ತಿತ್ತು! ನನ್ನ ಹಾಗೆಯೇ ಯೋಚಿಸುವ ಹಲವು ಗೆಳೆಯರು ಈ ಬಗ್ಗೆ ನನ್ನಲ್ಲಿ ಮೊದಲೇ ಆತಂಕ ಕೂಡ ವ್ಯಕ್ತಪಡಿಸಿದ್ದರು. ಅದು ಹೀಗೆ ಸಾಗುತ್ತದೆ ಎಂದು ಊಹಿಸಲು ದೊಡ್ಡ ಜ್ಞಾನವು ಬೇಕಿರಲಿಲ್ಲ!

ಉಡುಪಿಯಲ್ಲಿ ಒಂದು ತಿಂಗಳ ಹಿಂದೆ ಕೆಲವೇ ಕೆಲವು ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿಕೊಂಡು ಶಾಲೆಗೆ ಬಂದರು. ಅದು ತಮ್ಮ ಧಾರ್ಮಿಕ ಸಂಕೇತ ಎಂಬ ಜಿದ್ದಿಗೆ ಬಿದ್ದರು. ಆಗ ಕಾಲೇಜು ಆಡಳಿತ ಮಂಡಳಿಯವರು ಮತ್ತು ಪ್ರಿನ್ಸಿಪಾಲ್ ಅವರಿಗೆ ಬುದ್ದಿ ಹೇಳಿ ಅವರನ್ನು ತಡೆಯುವ ಪ್ರಯತ್ನವನ್ನು ಮಾಡಿದಾಗ ಅದೇ ಹುಡುಗಿಯರು ಇನ್ನಷ್ಟು ಹಠ ಹಿಡಿದರು.

ಕೆಲವೇ ದಿನಗಳಲ್ಲಿ ಅಲ್ಲಿಗೆ ವಿವಿಧ ಸಂಘಟನೆಗಳು ಪ್ರವೇಶ ಮಾಡಿದವು. ಅವರಿಗೆ ರಾಜಕೀಯ, ಪ್ರಚಾರಗಳು ಬೇಕಿತ್ತು. ಮೀಡಿಯಾಗೆ ಟಿ.ಆರ್.ಪಿ. ಅವರವರಿಗೆ ಬೇಕಾದ್ದು ಸಿಕ್ಕಿತು!

ಹಿಜಾಬ್ ಗೆ ಹಠ ಹಿಡಿದು ಕೂತವರು ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳು. ಈಗಾಗಲೇ ಅವರು ಒಂದು ತಿಂಗಳಿಂದ ತರಗತಿಯಿಂದ ಹೊರಗೆ ಇದ್ದಾರೆ. ಅವರ ಭವಿಷ್ಯದ ಬಗ್ಗೆ ಯೋಚನೆ ಮಾಡಲೇಬೇಕಾದ ಹೆತ್ತವರು ಇಂದಿಗೂ ತಮ್ಮ ಧಾರ್ಮಿಕ ಸಂಕೇತಗಳ ಮತ್ತು ಧಾರ್ಮಿಕ ನಂಬಿಕೆಗಳ ಪರವಾಗಿ ಮಾತಾಡುತ್ತಿದ್ದಾರೆ.

ಮುಂದೆ ಒಳ್ಳೆಯ ವೈದ್ಯೆಯೋ, ಇಂಜಿನಿಯರೋ ಅಥವಾ ವಿಜ್ಞಾನಿಯೋ ಏನು ಬೇಕಾದರೂ ಆಗಬಹುದಾದ ಆ ವಿದ್ಯಾರ್ಥಿನಿಯರ ಭವಿಷ್ಯ ಕಮರಿ ಹೋಗುತ್ತಿದೆ. ಅದನ್ನು ಯಾರೂ ಗಮನಿಸುತ್ತಿಲ್ಲ. ಶಿಕ್ಷಕನಾಗಿ ನನ್ನ ಆದ್ಯತೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅಥವ ಕೇಸರಿ ಶಾಲು ಅಲ್ಲ. ನನ್ನ ಆದ್ಯತೆ ಶಿಕ್ಷಣ ಮಾತ್ರ!

ನಾನು ಯಾವುದೇ ಧರ್ಮದ ವಿರೋಧಿ ಅಲ್ಲ. ನಾನೊಬ್ಬ ಹಿಂದೂ ಎಂದು ಹೇಳಲು ನನಗೆ ನಾಚಿಕೆ ಇಲ್ಲ. ಅದನ್ನು ತುಂಬಾ ಹೆಮ್ಮೆಯಿಂದ ನಾನು ಹೇಳಿಕೊಳ್ಳುತ್ತೇನೆ. ಆದರೆ ನನ್ನ ಧರ್ಮವು ನನ್ನ ಮನೆಯ ದೇವರ ಕೋಣೆಯಲ್ಲಿ, ನಾನು ನಂಬಿದ ದೇವರ ಗುಡಿಯಲ್ಲಿ, ನನ್ನ ಮನಸಿನಲ್ಲಿ ಇದ್ದರೆ ಸಾಕು ಎಂದು ನಾನು ನಂಬಿದ್ದೇನೆ. ನಾನು ಇದನ್ನು ಬೇರೆ ಯಾರಿಗೂ ಉಪದೇಶ ಮಾಡಲು ಹೋಗುವುದಿಲ್ಲ.

ಧರ್ಮ ಅನ್ನುವುದು ನಮಗೆ ಪ್ರದರ್ಶನದ ವಸ್ತು ಅಲ್ಲ. ಅದು ಆಗಲೇಬಾರದು. ಕೇಸರಿ ಶಾಲು ಧಾರ್ಮಿಕ ಸಭೆಗೆ, ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಿಗೆ, ಹಿಂದೂ ಸಮಾಜೋತ್ಸವ ಮೊದಲಾದ ವೇದಿಕೆಗೆ ಸರಿ. ಶಾಲೆಗೆ ಅದು ಯಾಕೆ ಬೇಕು?

ಹಿಜಾಬ್ ಅಥವಾ ಕೇಸರಿ ಶಾಲು ಎರಡೂ ಧಾರ್ಮಿಕ ನಂಬಿಕೆ ಆಗಿರಲಿ. ಆದರೆ ಅವುಗಳು ನಾನೊಬ್ಬ ಹಿಂದೂ ಅಥವಾ ನಾನೊಬ್ಬ ಮುಸ್ಲಿಂ ಎನ್ನುವ ಪ್ರತ್ಯೇಕತಾವಾದಕ್ಕೆ ಕಾರಣ ಆಗುತ್ತವೆ ಅನ್ನುವುದಾದರೆ ನಾನು ಶಿಕ್ಷಕನಾಗಿ ಎರಡನ್ನೂ ಖಂಡಿಸುತ್ತೇನೆ.

ಎರಡೂ ಧರ್ಮಗಳ ಮುಖಂಡರು, ಮಕ್ಕಳ ಕುಟುಂಬದ ಹಿರಿಯರು, ಧರ್ಮಗುರುಗಳು ಎಲ್ಲರೂ ಈ ರೀತಿಯಲ್ಲಿ ವರ್ತಿಸುವ ಮಕ್ಕಳನ್ನು ಕರೆದು ಕಿವಿಯನ್ನು ಹಿಂಡಿ ಬುದ್ದಿ ಹೇಳಬೇಕಾದ ತುರ್ತು ಕಾಲ ಇದು. ದೂರ ನಿಂತು ಬೆಂಕಿ ಹಚ್ಚಿ ಚಳಿ ಕಾಯಿಸುವ ಕಾಲ ಅಲ್ಲ!

ನಮ್ಮ ಕಾಲದಲ್ಲಿ (ತೀರಾ ಇತ್ತೀಚಿನವರೆಗೂ) ಮುಸ್ಲಿಂ ಹುಡುಗಿಯರು ಕಾಲೇಜುಗಳಿಗೆ ಬರುವಾಗ ಹಿಜಾಬ್ ಹಾಕಿಕೊಂಡು ಬರುತ್ತಿದ್ದರು. ಶಾಲೆಯ ಒಳಗೆ ಬಂದಾಗ ಅವರೇ ಅದನ್ನು ಮಡಚಿ ಬ್ಯಾಗಿನಲ್ಲಿ ಇಡುತ್ತಿದ್ದರು. ಹಾಗೆ ಮಾಡಲು ಅವರಿಗೆ ಯಾರೂ ಹೇಳುವ ಅಗತ್ಯ ಇರಲಿಲ್ಲ. ಕಾರಣ ಅವರಿಗೂ ಗೆಳೆತನವು ಬೇಕಿತ್ತು. ತಮ್ಮನ್ನು ಮುಸ್ಲಿಂ ಹುಡುಗಿಯರು ಎಂದು ಬೇರೆಯವರು ಪ್ರತ್ಯೇಕವಾಗಿ ನೋಡುವುದು ಅವರಿಗೆ ಇಷ್ಟ ಆಗುತ್ತಿರಲಿಲ್ಲ.

ಹಿಂದೂ ಮಕ್ಕಳು ಕೂಡ ಅವರನ್ನು ಮುಸ್ಲಿಂ ಹುಡುಗಿ ಆಗಿ ನೋಡುತ್ತಿರಲಿಲ್ಲ. ಮುಸ್ಲಿಂ ಹುಡುಗಿಯರು ಶಾಲೆಯ ಪ್ರತೀ ಒಂದು ಚಟುವಟಿಕೆಗಳಲ್ಲಿ ಅತ್ಯಂತ ಸ್ಫೂರ್ತಿಯಿಂದಲೆ ಭಾಗವಹಿಸುತ್ತಿದ್ದರು. ಶಾಲೆಯ ಕ್ರೀಡಾ ಚಟುವಟಿಕೆ, ನೃತ್ಯ, ಸಂಗೀತ, ನಾಟಕ, ಓದುವಿಕೆ ಎಲ್ಲದರಲ್ಲೂ ಅವರಿಗೆ ಆಸಕ್ತಿ ಇತ್ತು.

ನನ್ನ ಒಂದು ನಾಟಕದಲ್ಲಿ ಪ್ರತಿಭಾವಂತ ಮುಸ್ಲಿಂ ಹುಡುಗಿ ಒಬ್ಬಳು ಹಿಂದೂ ದೇವತೆಯ ಪಾತ್ರವನ್ನು ಹಾಕಿದಾಗ ಆಕೆಯ ಹೆತ್ತವರು ಅದನ್ನು ಪ್ರಶ್ನೆ ಮಾಡಲೇ ಇಲ್ಲ! ಅವರ ಮನೆಯವರು ಎಲ್ಲರೂ ಬಂದು ಇಡೀ ಪೌರಾಣಿಕ ನಾಟಕ ನೋಡಿ ಖುಷಿ ಪಟ್ಟು ಧನ್ಯವಾದ ಹೇಳಿ ಹೋಗಿದ್ದರು!

ಶಾಲೆಯ ದಿನಗಳು ಮುಗಿದು ಹೊರಟು ನಿಂತಾಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮಕ್ಕಳು ಪರಸ್ಪರ ಅಪ್ಪಿಕೊಂಡು ಕಣ್ಣೀರು ಸುರಿಸುವ ಕಾಲವೂ ಇತ್ತು. ಈಗಲೂ ಎಷ್ಟೋ ಕಡೆ ಪರಿಸ್ಥಿತಿಯು ಹಾಗೆಯೇ ಇದೆ. ನನ್ನ ಪ್ರಕಾರ ಆ ಪ್ರಾಯದ ಹದಿಹರೆಯದ ಮಕ್ಕಳು ಅಷ್ಟೇ ಮುಗ್ಧರು. ಆದರೆ ಅವರ ಹಿಂದೆ ಬಲವಾಗಿ ನಿಂತಿರುವ ವಿಕೃತವಾದ ಮನಸ್ಸುಗಳು ಸರಿಯಾಗಬೇಕು ಅಷ್ಟೇ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಒಬ್ಬಳು ಸ್ವಂತ ಶಕ್ತಿಯಿಂದ ಹೈಕೋರ್ಟನ ಮೆಟ್ಟಿಲನ್ನು ಏರಿದಳು ಅಂದರೆ ನಾನು ನಂಬುವುದಿಲ್ಲ.

ಅತ್ತೂರು ಜಾತ್ರೆಗೆ ಹೋಗಿ ಕ್ಯಾಂಡಲ್ ಹಚ್ಚುವಾಗ, ರಂಝಾನ್ ಹಬ್ಬದಂದು ನನ್ನ ಹಲವು ಮುಸ್ಲಿಂ ಸ್ನೇಹಿತರ ಮನೆಗಳಿಗೆ ಭೇಟಿ ಕೊಟ್ಟಾಗ, ನನ್ನ ಊರಿನ ಲಕ್ಷ ದೀಪದ ದೀಪಗಳಿಗೆ ಎಣ್ಣೆ ತುಂಬಿಸುವಾಗ, ನನ್ನ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಮದುವೆಗೆ ಹೋದಾಗ, ಮುಸ್ಲಿಂ ಮಕ್ಕಳು ನಮ್ಮ ಮದುವೆಗೆ ಬನ್ನಿ ಸರ್ ಎಂದು ತುಂಬಾ ಪ್ರೀತಿಯಿಂದ ಮದುವೆಯ ಕಾಗದವನ್ನು ಕೊಟ್ಟಾಗ ನನ್ನ ಖುಷಿಯ ಭಾವನೆಗಳು ಒಂದೇ ರೀತಿ ಇರುತ್ತವೆ. ಅದು ನನ್ನ ನಂಬಿಕೆ. ಅದು ಈವರೆಗೆ ಬದಲಾವಣೆ ಆಗಿಲ್ಲ. ಮುಂದೆ ಬದಲಾಗುವುದು ಕೂಡ ಇಲ್ಲ.

ನಾನು ನನ್ನ ಕಾಲೇಜು ದಿನದಲ್ಲಿ ದೂರದ ಊರಲ್ಲಿ ಒಂದು ವಾರದ ಆರ್.ಎಸ್.ಎಸ್ ಕ್ಯಾಂಪಿನಲ್ಲಿ ಭಾಗವಹಿಸುವಾಗ ನನ್ನ ರೂಮ್ ಮೇಟ್ ಒಬ್ಬ ದಲಿತ ಹುಡುಗನು ಇದ್ದನು. ಅವನಿಗೆ ಮುಜುಗರ ಆದೀತು ಎಂದು ಭಾವಿಸಿಕೊಂಡು ನಾನು ನನ್ನ ಜನಿವಾರವನ್ನು ಟ್ರಂಕಲ್ಲಿ ಅಡಗಿಸಿ ಇಟ್ಟಿದ್ದೆ! ನಾನು ಬೆಳೆದ ಯಾವ ಶಾಲೆ, ಕಾಲೇಜು, ಸಂಸ್ಥೆಗಳು ಕೂಡ ನನಗೆ ಪ್ರತ್ಯೇಕತಾವಾದವನ್ನು ಕಲಿಸಲಿಲ್ಲ.

ನಾನು ಒಬ್ಬ ಹಿಂದೂ ಆಗಿ ಹಿಜಾಬ್ ಅಥವಾ ಕೇಸರಿ ಶಾಲನ್ನು ದ್ವೇಷ ಮಾಡಲು ಸಾಧ್ಯವೇ ಇಲ್ಲ. ನಾನು ಎಲ್ಲರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇನೆ. ನಾನು ದ್ವೇಷ ಮಾಡುವುದು ಅದರ ಹಿಂದೆ ನಿಂತಿರುವ ಮತ್ತು ಪ್ರತ್ಯೇಕತಾವಾದವನ್ನು ಬೆಂಬಲಿಸುವ ಮನಸ್ಸುಗಳನ್ನು! ಮುಗ್ಧ ಮಕ್ಕಳ ಹಿಂದೆ ನಿಂತು ಅವರನ್ನು ಸೂತ್ರದ ಗೊಂಬೆಗಳ ಹಾಗೆ ಕುಣಿಸುವ ಸಂಘಟನೆಗಳನ್ನು! ಅವರ ಭವಿಷ್ಯದ ಬಗ್ಗೆ ಒಂದಿಷ್ಟು ಕೂಡ ಯೋಚನೆ ಮಾಡದೆ ಹಠ ಸಾಧಿಸಲು ಹೊರಟು ನಿಂತವರನ್ನು!

ಈ ವಿವಾದಗಳು ರಾಜ್ಯ ಮಟ್ಟಕ್ಕೆ ಮತ್ತು ರಾಷ್ಟ್ರ ಮಟ್ಟಕ್ಕೆ ತಲುಪಲು ಹೆಚ್ಚು ದಿನಗಳು ಬೇಡ. ಈಗಲೇ ಬೆಂಕಿ ಹರಡಲು ಆರಂಭ ಆಗಿದೆ. ಮುಂದೆ ಕೋರ್ಟು ಆದೇಶಗಳು ಇಂತಹ ವಿದ್ಯಾರ್ಥಿಗಳ ಪರವಾಗಿ ಬಂದರೆ ಶಾಲೆಗಳನ್ನು ನಡೆಸುವುದೇ ಕಷ್ಟ ಆಗಬಹುದು.

ಮುಂದೆ ನಮಗೆ ಪ್ರತ್ಯೇಕವಾದ ತರಗತಿ ಕೊಡಿ, ಪ್ರತ್ಯೇಕ ಶಾಲೆಗಳನ್ನು ಕಟ್ಟಿ ಕೊಡಿ, ಪ್ರತ್ಯೇಕ ಅಧ್ಯಾಪಕರನ್ನು ಕೊಡಿ, ಪ್ರತ್ಯೇಕ ಬಸ್ಸುಗಳನ್ನು ಕೊಡಿ…. ಎಂದು ವಿದ್ಯಾರ್ಥಿಗಳು ಹಠ ಹಿಡಿಯುವ ದಿನ ದೂರ ಇಲ್ಲ. ಅಲ್ಲಿಗೆ ನನ್ನ ಭಾರತದ ಚಿತ್ರಣ ಹೇಗಿರಬಹುದು?

ಒಂದು ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಎಲ್ಲ ಕಡೆ ಸರಕಾರವೇ ಮುಂದೆ ನಿಂತು ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ತೆರೆದಿತ್ತು. ಈಗ ಕಾಲವು ಬದಲಾದ ಕಾರಣ ಅವುಗಳ ಅನಿವಾರ್ಯತೆ ಇಲ್ಲ. ಈಗ ಹುಡುಗ ಮತ್ತು ಹುಡುಗಿಯರು ಜೊತೆಯಾಗಿ ಒಂದೇ ಕಡೆಯಲ್ಲಿ ಕಲಿಯುವ ವ್ಯವಸ್ಥೆಯನ್ನು ಸಮಾಜ ಒಪ್ಪಿಕೊಂಡಿದೆ, ಮತ್ತೆ ಆ ವ್ಯವಸ್ಥೆಯೇ ಹೆಚ್ಚು ಜನಪ್ರಿಯ ಆಗಿದೆ.

ಆದರೂ ತಾಲೂಕಿಗೆ ಒಂದು ಅಥವಾ ಎರಡು ಇಂತಹ ಹೆಣ್ಣು ಮಕ್ಕಳ ಶಾಲೆ ಇವೆ. ಗಮನಿಸಿ, ಈ ಹಿಜಾಬ್ ಪ್ರಕರಣ ಆರಂಭ ಆದದ್ದು ಉಡುಪಿಯ ಹೆಣ್ಣು ಮಕ್ಕಳ ಪದವಿಪೂರ್ವ ಕಾಲೇಜಿನಲ್ಲಿ! ನಮಗೆ ಪುರುಷ ಅಧ್ಯಾಪಕರ ಮುಂದೆ ಹಿಜಾಬ್ ಹಾಕದೆ ಕುಳಿತುಕೊಳ್ಳಲು ಮುಜುಗರ ಆಗುತ್ತದೆ ಎಂದು ಆ ಹೆಣ್ಣು ಮಕ್ಕಳು ಹೇಳಿದರೆ ನಾನದನ್ನು ಒಪ್ಪುವುದಿಲ್ಲ. ಅದು ಅವರ ಮನದ ಮಾತು ಆಗಿರಲು ಸಾಧ್ಯವೇ ಇಲ್ಲ. ಮುಂದೆ ಡಾಕ್ಟರ್, ವಿಜ್ಞಾನಿ, ಇಂಜಿನಿಯರ್ ಆಗಿ ಬೆಳೆಯಬೇಕಾದ ಮಕ್ಕಳು ಹೇಳುವ ಮಾತು ಅದಲ್ಲ!

ಮತ್ತು ಅಂತಹ ಮೈಂಡ್ ಸೆಟ್ ಗಳಿಗೆ ಕೌಂಟರ್ ಮಾತ್ರ ಹಿಂದೂ ಹುಡುಗರ ಕೇಸರಿ ಶಾಲು ಆಗಬಾರದು! ತ್ಯಾಗದ ಪ್ರತೀಕವಾದ ಕೇಸರಿ ಬಣ್ಣವು ಶಿಕ್ಷಣ ಸಂಸ್ಥೆಗಳಿಗೆ ಯಾಕೆ ಬರಬೇಕು? ಸರಕಾರವು ಇದನ್ನು ಪರಿಹಾರ ಮಾಡಲು ತಜ್ಞರ ಸಮಿತಿ ರಚನೆ ಮಾಡಿ ವರದಿಗೆ ಕಾಯುತ್ತಿದೆ. ಅಲ್ಲಿ ತನಕ ಯಥಾಸ್ಥಿತಿಯನ್ನು ಕಾಪಾಡಲು ಸರಕಾರ ಆದೇಶ ನೀಡಿದೆ. ಅದು ತುಂಬಾ ಎಚ್ಚರಿಕೆಯ ನಡೆ ಆಗಿದೆ.

ಹಿಜಾಬ್, ಕೇಸರಿ ಶಾಲು ಜಿದ್ದಿನಿಂದ ನಮ್ಮ ಊರಿನ ಶಿಕ್ಷಣ ಸಂಸ್ಥೆಗಳು ನಿತ್ಯವೂ ಸಂಘರ್ಷದ ತಾಣ ಆಗಬಹುದು. ಮಕ್ಕಳು ತಮ್ಮ ಕಲಿಯುವ ಆಸಕ್ತಿಯನ್ನು ಖಂಡಿತ ಕಳೆದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ನಡುವೆ ಕಂದಕಗಳು ನಿರ್ಮಾಣ ಆಗಬಹುದು. ಈ ವಿವಾದಕ್ಕೆ ಆದಷ್ಟು ಬೇಗ ಪರಿಹಾರವನ್ನು ಹುಡುಕುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ.

ಬೆಂಕಿ ಹಚ್ಚಿ ಆಗಿದೆ. ಅದು ಊರಿಡೀ ಹಬ್ಬುವ ಮೊದಲು ನಾವು ಎಚ್ಚರ ಆಗಬೇಕು.

ಲೇಖನ – ರಾಜೇಂದ್ರ ಭಟ್ ಕೆ (ಶಿಕ್ಷಕರು ಮತ್ತು ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.