ನವದೆಹಲಿ, ಫೆ.16: ಶನಿವಾರ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಐದು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ರೈಲುಗಳನ್ನು ಹತ್ತಲು ಕಾಯುತ್ತಿದ್ದ ಪ್ರಯಾಣಿಕರ ಹಠಾತ್ ಹೆಚ್ಚಳ ಇದಕ್ಕೆ ಕಾರಣವಾಗಿತ್ತು. 14 ಮತ್ತು 15 ನೇ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಗಳಲ್ಲಿ ಈ ಘಟನೆ ನಡೆದಿದ್ದು, ಕೆಲವು ಪ್ರಯಾಣಿಕರು ಇಳಿಯುವಾಗ ಜಾರಿಬಿದ್ದು, ಭೀತಿಯಿಂದ ನೂಕು ನುಗ್ಗಲು ಉಂಟಾಯಿತು.
ರೈಲು ನಿರ್ಗಮನದಲ್ಲಿನ ವಿಳಂಬ ಮತ್ತು ಪ್ರತಿ ಗಂಟೆಗೆ 1,500 ಸಾಮಾನ್ಯ ಟಿಕೆಟ್‌ಗಳ ಮಾರಾಟವು ನಿಲ್ದಾಣದಲ್ಲಿ ಅಸ್ತವ್ಯಸ್ತ ಪರಿಸ್ಥಿತಿಯನ್ನು ಸೃಷ್ಟಿಸಿರಬಹುದು ಎಂದು ಕೆಲವು ಮೂಲಗಳು ಹೇಳಿದರೆ, ಪ್ಲಾಟ್‌ಫಾರ್ಮ್‌ಗಳ ಬದಲಾವಣೆಯ ಬಗ್ಗೆ ತಪ್ಪು ಘೋಷಣೆಯು ಕಾಲ್ತುಳಿತಕ್ಕೆ ಕಾರಣವಾದ ಗೊಂದಲವನ್ನು ಉಂಟುಮಾಡಿರಬಹುದು ಎನ್ನಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತನಿಖೆಗೆ ಆದೇಶಿಸಿದ್ದು ಲೋಪಗಳ ತನಿಖೆಗಾಗಿ ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ.
ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ದುಃಖಿತನಾಗಿದ್ದೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅಧಿಕಾರಿಗಳು ಸ್ಥಳದಲ್ಲಿದ್ದು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.