ಮುಂಬಯಿಯಲ್ಲಿ ಬುಧವಾರ ಭಾರಿ ಮಳೆಯಾಗುವ ಮೂಲಕ ಮುಂಗಾರು ಭರ್ಜರಿಯಾಗಿ ಆರಂಭಗೊಂಡಿದೆ. ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಮಂಗಳವಾರ ರಾತ್ರಿಯಿಂದ ವರುಣನ ಆಗಮನವಾಗಿದ್ದು ಬುಧವಾರ ಮುಂಜಾನೆಯಿಂದ ವೇಗ ಪಡೆದುಕೊಂಡಿದ್ದು ಹಲವೆಡೆ ನೆರೆಯ ವಾತಾವರಣ ನಿರ್ಮಾಣವಾಗಿದೆ. ಹಳಿಗಳ ಮೇಲೆ ನೀರು ನಿಂತ ಕಾರಣ ಮುಂಬಯಿಯನ್ನು ಸಂಪರ್ಕಿಸುವ ಸ್ಥಳೀಯ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಿದೆ. ಕೆಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಕೊಲಾಬದಲ್ಲಿ 65.4 ಎಂಎಂ ಮಳೆಯಾಗಿದ್ದು ಸಾಂತಾಕ್ರೂಸ್ ನಲ್ಲಿ 50.4 ಎಂಎಂ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮುಂಗಾರು ಮಾರುತಗಳು ಮಹಾರಾಷ್ಟ್ರದ ಹಲವೆಡೆ ವ್ಯಾಪಿಸಿದ್ದು ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಮುಂಗಾರು ಶೀಘ್ರದಲ್ಲಿ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.